

ಮೃತ್ಯುಂಜಯ ಕಪಗಲ್ ಬೆಂಗಳೂರು
ಗ್ರಾಮೀಣ ಜನವಸತಿ ಪ್ರದೇಶಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ, ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳ ಅನುಮೋದನೆಗೆ ವಿಳಂಬದ ಗ್ರಹಣ ಹಿಡಿದಿದೆ. ಹಾಗೆಯೇ ಅನುಷ್ಠಾನ ಹಂತದಲ್ಲಿನ ಲೋಪಗಳಿಂದಾಗಿ ಯೋಜನೆ ಉದ್ದೇಶವೇ ಅಧಃಪತನದ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ. ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 40 ಸಾವಿರ ಕಾಮಗಾರಿ ಅಂದಾಜಿಸಲಾಗಿತ್ತು. ಈ ಪೈಕಿ 22 ಸಾವಿರ ಪೂರ್ಣಗೊಂಡಿದೆ. ಅಂದರೆ ಯೋಜನೆ ಆರಂಭದಿಂದ ಈವರೆಗೆ ಶೇಕಡ ಅರ್ಧದಷ್ಟು ಪ್ರಗತಿಯಷ್ಟೇ ಸಾಧ್ಯವಾಗಿದೆ. ಇಲಾಖಾಮಟ್ಡದಲ್ಲಿ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಕಡತಗಳ ವಿಲೇವಾರಿ ಮಂದಗತಿಯಲ್ಲಿ ಇರುವುದು ಪ್ರಗತಿ ಕುಂಠಿತವಾಗಲು ಮೂಲ ಕಾರಣವೆಂಬ ದೂರುಗಳಿವೆ.
ಉದ್ದೇಶವೇನು?: ಹಳ್ಳಿಗಳ ಜನರು ನೀರಿಗಾಗಿ ಅಲೆಯುವುದು, ಅಶುದ್ಧ ನೀರು ಕುಡಿದು ಅನಾರೋಗ್ಯಕ್ಕೀಡಾಗುವುದು ಹಾಗೂ ಬೇಸಿಗೆಯಲ್ಲಿ ಪರದಾಟ ತಪ್ಪಿಸುವ ಉದ್ದೇಶದಿಂದ ಪ್ರತಿ ಮನೆಗೆ ನಲ್ಲಿ ನೀರು ಪೂರೈಸುವುದು ಯೋಜನೆಯ ಮೂಲ ಉದ್ದೇಶ.
ಪರಿಸ್ಥಿತಿ ಏನಿದೆ?: ಇನ್ನೆರಡು ತಿಂಗಳು ಕಳೆದರೆ ಬೇಸಿಗೆ ಕಾಲಿಡುತ್ತದೆ. ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನೀಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅನುದಾನದ ಕೊರತೆ, ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ವಿಳಂಬವೇ ಈ ವೈಫಲ್ಯಕ್ಕೆ ಕಾರಣವೆಂಬ ಆರೋಪ ಕೇಳಿಬರುತ್ತಿದೆ.
ಕಾಲಮಿತಿಯೊಳಗೆ ಕಷ್ಟ: ಜಲ ಜೀವನ್ ಮಿಷನ್ ಯೋಜನೆಯಡಿ ಜನವಸತಿ ಪ್ರದೇಶದ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ 2024ರ ಡಿಸೆಂಬರ್ 31ರ ಕಾಲಮಿತಿ ವಿಧಿಸಲಾಗಿತ್ತು. ತಾಂತ್ರಿಕ, ಆಡಳಿತಾತ್ಮಕ ಅಡಚಣೆ, ಕರೊನಾ ಸಾಂಕ್ರಾಮಿಕ ರೋಗದ ಹಾವಳಿ ಇನ್ನಿತರ ಕಾರಣಗಳಿಗೆ ವಿಳಂಬವಾಯಿತು. ರಾಜ್ಯ ಸರ್ಕಾರ ಸೂಕ್ತ ವಿವರಣೆಯೊಂದಿಗೆ ಮಾಡಿಕೊಂಡ ಮನವಿಯಂತೆ 2026ರ ಮಾರ್ಚ್ ಅಂತ್ಯದವರೆಗೆ ಗಡುವು ವಿಸ್ತರಣೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಅಸ್ತು ಎಂದಿದೆ. ಆದರೆ ಆ ಗಡುವಿನೊಳಗೂ ನೀರು ಪೂರೈಕೆ ಆಗುವುದು ಅನುಮಾನ ಎನ್ನಲಾಗಿದೆ.
ಸಿಎಂ ಆದೇಶವೂ ನಗಣ್ಯ: ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ವಿಳಂಬ ತಪ್ಪಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಕಡತ ವಿಲೇವಾರಿ ಹಂತ ಕಡಿತಗೊಳಿಸುವ ಮಹತ್ವದ ನಿರ್ಣಯ ಕೈಗೊಂಡರು. ಅನುಮೋದನೆಗಾಗಿ ಸಚಿವರಿಗೆ ಕಡತ ಕಳುಹಿಸುವ ಬದಲು ಆಯಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಧಿಕಾರ ನೀಡಿದರು. ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಆದೇಶವನ್ನು ಪಾಲಿಸುತ್ತಿದ್ದಾರೆ. ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಡತಗಳನ್ನು ಸಚಿವರಿಗೆ ರವಾನಿಸಿ ಕೈಕಟ್ಟಿ ಕುಳಿತಿದ್ದಾರೆ, ಸಿಎಂ ಆದೇಶ ಕೂಡ ಇಲಾಖೆಯಲ್ಲಿ ನಗಣ್ಯವಾಗಿದೆ. ಹೀಗೆ ಸಚಿವರಿಗೆ ಮಂಡನೆಯಾಗುತ್ತಿರುವ ಕಡತಗಳಿಗೆ ತಿಂಗಳುಗಟ್ಟಲೆಯಾದರೂ ಅನುಮೋದನೆ ದೊರಕುತ್ತಿಲ್ಲ.
ಕಾಡುತ್ತಿದೆ ಅನುದಾನದ ಕೊರತೆ: ರಾಜ್ಯದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿಗಳಿಗೆ ಭಾರಿ ಪ್ರಮಾಣದ ಬಿಲ್ ಮೊತ್ತ ಬಾಕಿಯಿರುವುದು ಮತ್ತೊಂದು ದೊಡ್ಡ ಸಮಸ್ಯೆ. ಅನುಷ್ಠಾನದ ಹೊಣೆ ಹೊತ್ತ ಅಧಿಕಾರಿಗಳು ಕೆಲವೆಡೆ ಗುತ್ತಿಗೆದಾರರ ಮನವೊಲಿಸಿ ನಿಧಾನಗತಿಗೆ ಅವಕಾಶ ಕೊಟ್ಟಿದ್ದಾರೆ. ಬಹುತೇಕ ಕಡೆ ಈ ಕಾಮಗಾರಿಗಳು ತಾತ್ಕಾಲಿಕವಾಗಿ ಸ್ಥಗಿತವಾಗಿವೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬರೆದಿರುವ ಪತ್ರದ ಪ್ರಕಾರ 1,745 ಕೋಟಿ ರೂ ಬಾಕಿಯಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ರಿಗೆ ನ.16ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದು, ಬಾಕಿ ಮೊತ್ತ 1,745 ಕೋಟಿ ರೂ. ಬಿಡುಗಡೆಗೆ ಕೋರಿದ್ದಾರೆ. ಕಳೆದ ನಾಲ್ಕು ವರ್ಷಗಳ ಆರ್ಥಿಕ ಪ್ರಗತಿ ಶೇ.36, ಭೌತಿಕ ಪ್ರಗತಿ ಶೇ.50ರಷ್ಟಾಗಿದೆ. ಇನ್ನುಳಿದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಬಾಕಿ ಅನುದಾನದ ಶೀಘ್ರ ಬಿಡುಗಡೆಗೆ ಮನವಿ ಮಾಡಿದ್ದಾರೆ.
ನಿರ್ಮಾಣ ಬಳಿಕ ಜಲ ಮೂಲ ಶೋಧ: ನದಿ ಆಶ್ರಯಿಸಿ ಕೆರೆಗಳ ಭರ್ತಿ, ಮದರ್ ಟ್ಯಾಂಕ್, ಶುದ್ಧೀಕರಣ ಘಟಕ ನಿರ್ವಣ, ಅಲ್ಲಿಂದ ಶುದ್ಧೀಕರಿಸಿದ ನೀರು ಊರಿನ ಓವರ್ ಹೆಡ್ ಟ್ಯಾಂಕ್ಗೆ ಪೂರೈಸಲು ಕೊಳವೆಮಾರ್ಗ ಹಾಕುವ ಕೆಲಸ ನಡೆದಿದೆ. ಎಷ್ಟೋ ಊರುಗಳಲ್ಲಿ ಜನರ ಒತ್ತಡ, ಗುತ್ತಿಗೆದಾರರ ಲಾಬಿ, ಯೋಜನೆ ಹಸ್ತಾಂತರಿಸಿಕೊಳ್ಳುವ ತರಾತುರಿಯಲ್ಲಿ ಚಾಲ್ತಿ ಕೊಳವೆ ಬಾವಿ, ಕೆರೆಯ ನೀರು ಕೊಳವೆಗೆ ಸಂರ್ಪಸಿ ಕೈ ತೊಳೆದುಕೊಳ್ಳಲಾಗಿದೆ. ಪ್ರತಿ ಮನೆಗೆ ಸಂರ್ಪಸಿದ ನಲ್ಲಿ ಅಡಿಯಲ್ಲಿ ಫೋ› ಕಂಟ್ರೋಲರ್ ಉಪಕರಣ ಅಳವಡಿಸಲಾಗಿದೆ. ಒಂದು ತಾಸಿನಲ್ಲಿ ಆ ಮನೆಗೆ ಎಷ್ಟು ನೀರು ಕೊಡಬೇಕು ಅಷ್ಟನ್ನೇ ಒದಗಿಸುತ್ತದೆ. ಇದರಿಂದ ಮನೆಗಳು ನಿಗದಿಯಾದಷ್ಟೇ ನೀರು ಪಡೆಯಲು ಸಾಧ್ಯವಿದೆ. ಮೇಲ್ಭಾಗ, ಕೊನೆ ಭಾಗ ಎಂಬ ವ್ಯತ್ಯಾಸವೂ ಆಗದು. ಆದರೆ ಅಶುದ್ಧ ನೀರು ಪೂರೈಸಿದರೆ ಫೋ› ಕಂಟ್ರೋಲರ್ ಕೆಲಸ ಮಾಡದು. ನಲ್ಲಿಯಲ್ಲಿ ನೀರು ಬರುವುದಿಲ್ಲ. ಇದೇ ಕಾರಣಕ್ಕೆ ಈ ಉಪಕರಣ ಕಿತ್ತು ಸಿಮೆಂಟ್ ಕಾಂಕ್ರೀಟ್ ಮಾಡಿ ಸತ್ಯಾಂಶ ಮುಚ್ಚಿಡಲಾಗಿದೆ ಎಂಬ ವಿವರಗಳು ಈ ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಹುಳುಕು ಸರಿಪಡಿಸಲು ಕಾಲವ್ಯಯ: ಈಗಾಗಲೇ ಯೋಜನೆ ಪೂರ್ಣಗೊಳಿಸಿದ ಗ್ರಾಮಗಳಲ್ಲಿ ಕಾಮಗಾರಿಗಳ ಗುಣಮಟ್ಟ, ದುರುಪಯೋಗ, ಅವೈಜ್ಞಾನಿಕ ಕೆಲಸ ಸೇರಿ ಅನೇಕ ಆಪಾದನೆಗಳು, ದೂರುಗಳು ಇಲಾಖೆಗೆ ಸಲ್ಲಿಕೆಯಾಗಿದ್ದವು. ಸಚಿವ ಪ್ರಿಯಾಂಕ್ ಖರ್ಗೆ ಇವನ್ನು ಗಂಭೀರವಾಗಿ ಪರಿಗಣಿಸಿ ತಪಾಸಣೆಗೆ ಉನ್ನತಮಟ್ಟದ ತಜ್ಞರ ತಂಡ ರಚಿಸಿದ್ದರು. ಸ್ಥಳಗಳಿಗೆ ಭೇಟಿ, ವಸ್ತುಸ್ಥಿತಿ ತಪಾಸಣೆ, ಅಧ್ಯಯನ ನಡೆಸಿದ ಈ ತಂಡವು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿಯಾಗಿದೆ. ರಾಶಿಗಟ್ಟಲೇ ಹುಳುಕುಗಳು ಪತ್ತೆಯಾಗಿದ್ದು, ಅದನ್ನು ಸರಿಪಡಿಸುವುದಕ್ಕೆ ಕಾಲವ್ಯಯವಾಗುತ್ತಿದೆ.
ಯೋಜನೆಯ ಎಡವಟ್ಟುಗಳು