

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 2025ರಲ್ಲಿ ನಡೆಸುವ ಯುಜಿಸಿಇಟಿ, ಪಿಜಿಸಿಇಟಿ, ಡಿಸಿಇಟಿ ಸೇರಿ ಐದು ಪರೀಕ್ಷೆಗಳ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಪ್ರಕಟಿಸಿದೆ.
2024-25ನೇ ಸಾಲಿನ ಇಂಜಿನಿಯರಿಂಗ್, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏ.16 ಮತ್ತು 17ರಂದು ಸಿಇಟಿ ನಡೆಸಲಿದೆ. ಸಿಇಟಿಗೆ ಜ.23ರಿಂದ ಫೆ.21ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗುರುವಾರ ಪ್ರಕಟಿಸಿದರು.
ಏ.16ರಂದು ಬೆಳಿಗ್ಗೆ 10.30ರಿಂದ ಭೌತಶಾಸ ಮತ್ತು ಮಧ್ಯಾಹ್ನ 2.30ರಿಂದ ರಾಸಾಯನಶಾಸ ಹಾಗೂ ಏ.17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳಿಗೂ ಅರ್ಜಿ:
ಸಿಇಟಿ-2025ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.