

ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಅಪ್ಪುಗೆ ಕರ್ನಾಟಕ ರತ್ನ ಯಾರು ಕೊಡಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ನವೆಂಬರ್ 1ಕ್ಕೆ ವಿಧಾನಸೌಧದ ವಿಶಾಲ ಮೆಟ್ಟಿಲುಗಳ ಮೇಲೆ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಮುಖ್ಯ ಅತಿಥಿಯ ಹುಡುಕಾಟ ನಡೆಸುತ್ತಿದ್ದಾರೆ. ನಟ ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಸಾಧಕರನ್ನು ಕರೆಸುವ ಆಲೋಚನೆಯಲ್ಲಿ ಬೊಮ್ಮಾಯಿ ಇದ್ದಾರೆ.
ಈಗಾಗಲೇ ಮೂವರು ಗಣ್ಯರನ್ನು ಸಿಎಂ ಸಂಪರ್ಕಿಸಿದ್ದಾರೆ. ರಜನೀಕಾಂತ್, ಐಶ್ವರ್ಯಾ ರೈ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಮುಖ್ಯ ಅತಿಥಿ ಸ್ಥಾನಕ್ಕೆ ಪರಿಗಣಿಸಿದ್ದಾರೆ. ತಮಿಳು ನಟ ರಜನೀಕಾಂತ್ಗೆ ಮೊದಲ ಆದ್ಯತೆ ನೀಡಲಾಗಿದ್ದು ಅವರು ಒಪ್ಪದಿದ್ದರೆ ನಟಿ ಐಶ್ವರ್ಯಾ ಹಾಗೂ ದೀಪಿಕಾ ಪಡುಕೋಣೆಯನ್ನು ಕರೆಯಲು ನಿರ್ಧರಿಸಲಾಗಿದೆ. ರಜನೀಕಾಂತ್ ಒಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಚಿತ್ರರಂಗದ ಗಣ್ಯರು, ಸರ್ಕಾರದ ಎಲ್ಲಾ ಸಚಿವರು ಇರಲಿದ್ದಾರೆ. ಈ ವರೆಗೆ 9 ಜನರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿದ್ದು ಪುನೀತ್ ರಾಜ್ಕುಮಾರ್ಗೆ ಸಿನಿಮಾ ಹಾಗೂ ಸಾಮಾಜಿಕ ಸೇವೆಗೆ ಪ್ರಶಸ್ತಿ ಸಿಗಲಿದೆ.