ಔಚಿತ್ಯವೆಂಬುದು ಮೆರುಗು ನೀಡುವ ಲಕ್ಷಣಗಳಲ್ಲೊಂದು

photo-68a3626e44ac3
Published on
‘ಔಚಿತ್ಯ’ ಎಂಬ ಪದವನ್ನು ಆಂಗ್ಲ ಭಾಷೆಯಲ್ಲಿ Befitting (ಬಿಫಿಟಿಂಗ್) ಎಂಬುದಾಗಿ ಅನುವಾದಿಸಿಕೊಳ್ಳಬಹುದು. ಕನ್ನಡದಲ್ಲಿ ಈ ಪದವನ್ನು ಸಮಯೋಚಿತವಾದುದು, ಸಂದರ್ಭೇಚಿತವಾದುದು ಎಂದು ಅರ್ಥೈಸಬಹುದು. ಔಚಿತ್ಯಪೂರ್ಣವಾದುದೆಂದರೆ, ಆಯಾಯ ಸಮಯ ಸಂದರ್ಭಕ್ಕೆ ಸರಿ ಹೋಗುವಂತಹ, ಮೆರುಗು ನೀಡುವಂತಹ ನಡೆನುಡಿಗಳು ಎಂದರ್ಥ.

ಉದಾಹರಣೆಗೆ ಪ್ರತಿಭಾ ವಂತರ ಪ್ರತಿಭೆಯನ್ನು ಸಾಧಕರ ಸಾಧನೆಯನ್ನು, ಯಾರದೋ ಸಾಹಸವನ್ನು, ತ್ಯಾಗವನ್ನು, ಸಹನೆಯನ್ನು, ಸಮಾಜಸೇವೆಯನ್ನು ಸದ್ಗುಣವನ್ನು, ಪರೋಪಕಾರವನ್ನು, ಅವಕಾಶ ಸಿಕ್ಕಿದಾಗಲೆಲ್ಲ ಹಾಗೆಯೇ ಅವಕಾಶ ಮಾಡಿಕೊಂಡೂ ಮನಸಾರೆ ಕೊಂಡಾಡುವುದು ಒಂದು ಔಚಿತ್ಯಪೂರ್ಣವಾದ ನಡವಳಿಕೆ ಎನಿಸೀತು. ಈ ಒಂದು ಮೆಚ್ಚುಗೆಯ ನುಡಿ, ಅವರಲ್ಲಿ ಸಂತಸದ, ಸಂತೃಪ್ತಿಯ, ಸಮಾಧಾನದ ಭಾವನೆಯನ್ನೇ ಹುಟ್ಟುಹಾಕುವುದಲ್ಲದೆ, ನಾವು ಅವರ ಪ್ರೀತಿಗೂ ಪಾತ್ರರಾಗುತ್ತೇವೆ. ಅಂತೆಯೇ ಸಮಯೋಚಿತವಾದ ಸಹಾಯಹಸ್ತ, ಸಹಕಾರ, ಇಲ್ಲವೇ ಉಡುಗೊರೆ ಕೂಡಾ ಔಚಿತ್ಯಪೂರ್ಣ ವರ್ತನೆಗಳು. ಆದರೆ ಇವೆಲ್ಲವೂ, ವ್ಯಕ್ತಿಯ ವೃತ್ತಿ ಮತ್ತು ವಯಸ್ಸಿಗೆ ಸರಿ ಹೋಗುವಂತಿರಬೇಕು.

‘ನಿನ್ನ ಅಜ್ಜಿಯ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಟ್ಟೆ?’ ಎಂಬ ಪ್ರಶ್ನೆಗೆ ಕಿಲಾಡಿ ಮೊಮ್ಮಗನು ಹೇಳುತ್ತಾನೆ ‘ಫುಟ್​ಬಾಲ್’, ‘ಅಯ್ಯೋ ಎದ್ದೇಳಲೂ ಆಗದ ನಿನ್ನಜ್ಜಿಗೆ ಫುಟ್​ಬಾಲ್ ಏಕೆ ಕೊಟ್ಟೆ’ ಎಂದು ಕೇಳಲು ಆತ ಹೇಳುತ್ತಾನೆ ‘ಏಕೆಂದರೆ, ನನ್ನ ಹುಟ್ಟುಹಬ್ಬಕ್ಕೆ ಆಕೆ ನನಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಳು!’

ಇದು ಔಚಿತ್ಯಪೂರ್ಣವಲ್ಲದ ಉಡುಗೊರೆಗಳಿಂದ ಆಗುವ ಅವಾಂತರಗಳು. ಔಚಿತ್ಯ-ಅನೌಚಿತ್ಯಗಳ ಪರಿವೆ ಇಲ್ಲದೆ ನಾವು ಮಾತನಾಡಿದಾಗ ಇಲ್ಲವೇ ನಡೆದು ಕೊಂಡಾಗ, ನಮ್ಮ ವ್ಯಕ್ತಿತ್ವಕ್ಕೇ ಧಕ್ಕೆ ಉಂಟಾಗುತ್ತದೆ; ಸಂಬಂಧಗಳೂ ಕೆಟ್ಟುಹೋಗುತ್ತವೆ. ಕೆಲವರ ಮಾತು ಗಳು ಅರ್ಥಪೂರ್ಣವಾದರೆ, ಇನ್ನು ಕೆಲವರದು ಅಪ್ರಸ್ತುತ, ಹಾಗೂ ಅನಾವಶ್ಯಕ. ಕಾರಣ Wise people talk, Because they have something to say. Fools also wants to talk, because they too wants to say same thing (ಜಾಣರಲ್ಲಿ ಹೇಳುವುದಕ್ಕೆ ಇರುತ್ತದೆ ಹಾಗಾಗಿ ಮಾತನಾಡುತ್ತಾರೆ. ಮೂರ್ಖರು ತಾವೇನಾದರೂ ಹೇಳಬೇಕೆಂಬ ಉದ್ದೇಶದಿಂದ ಮಾತನಾಡುತ್ತಾರೆ)

ಉದಾಹರಣೆಗೆ, ಪ್ರೈಮರಿ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ, ಕುಟುಂಬ ಯೋಜನೆಯ ವಿಧಿವಿಧಾನಗಳ ಬಗ್ಗೆ ಭಾಷಣ ಬಿಗಿದರೆ, ಅದು ಔಚಿತ್ಯಪೂರ್ಣ ಭಾಷಣವೆನಿಸದು!

ಅಂತೆಯೇ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುವಾಗ, ಹಾಸ್ಯಚಟಾಕಿಗಳನ್ನು ಹಾರಿಸೋದು, ಮದುವೆ ಮನೆಯಲ್ಲಿ ಇಲ್ಲವೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶೋಕಗೀತೆಯನ್ನು ಹಾಡುವುದು; ಸರ್ವಧರ್ಮ ಸಮ್ಮೇಳನದಲ್ಲಿ ಒಂದು ಧರ್ಮದ ಬಗ್ಗೆ ತೀಕ್ಷ್ಣವಾದ ಅಪಹಾಸ್ಯದ ಇಲ್ಲವೇ ಲಘು ವಾದ ಮಾತುಗಳನ್ನಾಡುವುದು ಔಚಿತ್ಯಪೂರ್ಣವಾದ ವರ್ತನೆಗಳಲ್ಲ. ಬದಲಾಗಿ ಅವು ಅನೌಚಿತ್ಯದ ಪರಮಾವಧಿ. ಇದೇ ರೀತಿ ಇನ್ನೊಂದು ಸಾಮಾನ್ಯ ವಿಷಯವಿದೆ.

ಹಲವರು ಈ ತಪು್ಪ ಮಾಡುವುದಿದೆ. ಅದೆಂದರೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅದೇ ಕಾಯಿಲೆಯಿಂದ ಮೃತರಾದ ವ್ಯಕ್ತಿಗಳ ಬಗ್ಗೆ ವಿವರಿಸಿ ಹೇಳುವುದು. ಇದು ಔಚಿತ್ಯ ಪೂರ್ಣವಲ್ಲ. ಕಡುಬಡವರ ಎದುರು ನಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವುದು; ಕಷ್ಟನಷ್ಟ ದಲ್ಲಿರುವವರ ಎದುರು ನಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದು, ಇತ್ಯಾದಿಗಳು ಔಚಿತ್ಯಪೂರ್ಣ ವರ್ತನೆಗಳೆನಿಸವು. ಮಾತ್ರವೇ ಅಲ್ಲ. ದೇವಸ್ಥಾನಗಳಿಗೆ ಹೋಗುವಾಗ ಇಲ್ಲವೇ ಹಬ್ಬ ಹುಣ್ಣಿಮೆಗಳಲ್ಲಿ ಭಾಗವಹಿಸುವಾಗ, ಹರಿದುಕೊಂಡಂತಿರುವ ಜೀನ್ಸ್ ಪ್ಯಾಂಟ್ ಧರಿಸಿಯೋ, ತುಂಡು ಲಂಗ ಧರಿಸಿಯೋ ಹೋಗುವುದು ಕೂಡಾ ಔಚಿತ್ಯಪೂರ್ಣವಾದ ಉಡುಗೆ ತೊಡಗೆಗಳೆನಿಸದು!.

ಕಾವ್ಯದಲ್ಲಾಗಲೀ, ಭಾಷಣಗಳಲ್ಲಾಗಲೀ ಸಂವಾದ- ಸಂವಹನ- ಸಂಭಾಷಣೆಯಲ್ಲಾಗಲೀ, ಔಚಿತ್ಯ ಮೆರುಗು ನೀಡುವ ಲಕ್ಷಣಗಳ ಲ್ಲೊಂದು. ಆದರೆ, ಎಲ್ಲೆ ಮೀರಿದರೆ, ಅಥವಾ ಅನವಶ್ಯಕ, ಅಪ್ರಸ್ತುತ, ಇಲ್ಲವೇ ನಾಟಕೀಯವಾದರೆ, ಅದು ‘ಅನೌಚಿತ್ಯ’ವೆನಿಸುತ್ತದೆ. ಆದುದರಿಂದ ಸಮಯ, ಸಂದರ್ಭ, ಕಾಲ- ದೇಶಕ್ಕನುಸಾರವಾಗಿ, ನಾವು ಯಾವುದು ಔಚಿತ್ಯ, ಯಾವುದು ಅನೌಚಿತ್ಯವೆಂಬುದನ್ನು ನಿರ್ಧರಿಸುವ ಜಾಣ್ಮೆಯನ್ನು ಹೊಂದಿರಬೇಕು.

ಇದನ್ನು ಸೂಕ್ಷ್ಮವಾಗಿ ಗಮನಿಸದೆ, ಮನ ಬಂದಂತೆ ನಡೆದುಕೊಂಡರೆ ನಾವು ಅಪಹಾಸ್ಯಕ್ಕೂ, ಅಪಕೀರ್ತಿಗೂ ಈಡಾಗಬಹುದು. ‘ಔಚಿತ್ಯ’ ವೆಂಬುದು ಕಾಲ-ದೇಶ-ಸಂದರ್ಭಗಳನ್ನು ಹೊಂದಿಕೊಂಡಿದೆ. ಒಂದು ಕಾಲದಲ್ಲಿ ಉಚಿತವೆನಿಸಿದ್ದು, ಕಾಲ ಬದಲಾದಂತೆ, ಅನುಚಿತವೆನಿಸಿಕೊಳ್ಳಬಹುದು. ಅಂತೆಯೇ ಒಂದು ಕಾಲದಲ್ಲ ಅನುಚಿತ ನಡವಳಿಕೆ, ಮತ್ತೊಂದು ಕಾಲದಲ್ಲಿ ಎಲ್ಲರ ಮೆಚ್ಚುಗೆ ಗಳಿಸಬಹುದು. ಉದಾಹರಣೆಗೆ, ಭಾರತದಲ್ಲಿ ಎಲ್ಲರಿಗೂ ‘ವಸ್ತ್ರ ಸಂಹಿತೆ’ ಔಚಿತ್ಯವೆನಿಸಿದರೆ, ಪಾಶ್ಚಾತ್ಯ ದೇಶಗಳಲ್ಲಿ ಈ ನಿರ್ಭಂಧವಿಲ್ಲ.

ಹಿಂದಿನ ಕಾಲದಲ್ಲಿ ವಿವಾಹವಾಗದ ವಿನಹ, ಗಂಡು ಹೆಣ್ಣು ಒಂದುಗೂಡುವಂತಿಲ್ಲವೆಂಬುದು ಔಚಿತ್ಯಪೂರ್ಣವಾದ ಸಾಮಾಜಿಕ ನಿರ್ಬಂಧವೆನಿಸಿದ್ದರೆ ಈಗ ಭಾರತವೂ ಸೇರಿದಂತೆ ‘ಲಿವಿಂಗ್ ಟುಗೆದರ್’ ಯಾರಿಗೂ ಅನೌಚಿತ್ಯವೆನಿಸದ ಒಂದು ಜೀವನ ಶೈಲಿಯಾಗಿಬಿಟ್ಟಿದೆ. ಒಟ್ಟಿನಲ್ಲಿ ಅನೌಚಿತ್ಯಗಳಿಗೆ ಲಕ್ಷ್ಮಣರೇಖೆಯನ್ನು ಹಾಕಿಕೊಳ್ಳಬೇಕಾದವರು ನಾವೇ. ಇದಕ್ಕೆ ಶಿಕ್ಷಣ ಒಂದೇ ಅಲ್ಲ, ಸಂಸ್ಕಾರವೂ ನೆರವಾಗಬೇಕು.

(ಪ್ರತಿಕ್ರಿಯಿಸಿ: drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net