ಸಂವೇದನೆಯ ಸೂಕ್ತ ಹೆಜ್ಜೆ

ಪಾರ್ಶ್ವವಾಯು (3)
Published on

ಸರ್ಕಾರಿ ಮತ್ತು ಖಾಸಗಿ ವಲಯ ಎರಡರಲ್ಲೂ ಋತುಚಕ್ರ ರಜೆ ನೀತಿ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ

ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ‘ಮುಟ್ಟಿನ ರಜೆ’ ನೀಡುವ ಮಹತ್ವದ ಹಾಗೂ ಮಹಿಳಾಪರ ನಿರ್ಧಾರವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಕರ್ನಾಟಕದ ‘ಋತುಚಕ್ರ ನೀತಿ-2025’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅಕ್ಟೋಬರ್ 9ರಂದು ಒಪ್ಪಿಗೆ ನೀಡಿದೆ. ದೇಶದ ಇತರ ಕೆಲ ರಾಜ್ಯಗಳಲ್ಲೂ ಮುಟ್ಟಿನ ರಜೆ ನೀತಿ ಇದೆಯಾದರೂ, ಅದು ಸರ್ಕಾರಿ ವಲಯಕ್ಕೆ ಸೀಮಿತ. ಆದರೆ, ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಎರಡೂ ವಲಯಕ್ಕೆ ಅನ್ವಯವಾಗಲಿದೆ.

ತುಚಕ್ರದ ಅವಧಿಯಲ್ಲಿ ಮಹಿಳೆಯರು ಅನುಭವಿಸುವ ಸಂಕಷ್ಟ ಮತ್ತು ನೋವು ಅಪಾರ. ಕೈ, ಕಾಲು, ಸೊಂಟ ನೋವಿನಂಥ ದೈಹಿಕ ಪೀಡೆ ಒಂದೆಡೆಯಾದರೆ ಈ ಅವಧಿಯಲ್ಲಿ ಮಾನಸಿಕ ಕಿರಿಕಿರಿಯೂ ಅಧಿಕ. ಸಿಟ್ಟು, ಉದ್ವೇಗ, ಹತಾಶೆ, ಬೇಸರದಂಥ ಮೂಡ್​ಸ್ವಿಂಗ್​ಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ರಕ್ತಸ್ರಾವದಿಂದ ತೀವ್ರ ಸುಸ್ತು, ಬಳಲುವಿಕೆ, ಆಯಾಸ. ಮುಟ್ಟಿನ ಅವಧಿ ಕೆಲವೊಮ್ಮೆ ಏಳು ದಿನಗಳವರೆಗೂ ಇರುತ್ತದೆ. ಮಹಿಳೆಯರು ಮನೆಗೆಲಸವನ್ನು ನಿರ್ವಹಿಸಿ, ಕಚೇರಿಗೆ ಬಂದು ಅಲ್ಲಿಯ ಜವಾಬ್ದಾರಿಗಳನ್ನು ಪೂರೈಸುವಷ್ಟರಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಮತ್ತು ಈ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ಮುಜುಗರದಿಂದಲೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ. ಈ ಅವಧಿಯಲ್ಲಿ ಆರೋಗ್ಯದಲ್ಲಿ ಏರುಪೇರುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಟ್ಟಿನ ಅವಧಿಯ ಐದು ದಿನಗಳು ಮಹಿಳೆಯರು ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕು, ಇದರಿಂದ ದೈಹಿಕವಾಗಿ ಮತ್ತು ಮಾನಸಿಕ ನೋವಿನಿಂದ ಉಪಶಮನ ಸಾಧ್ಯ ಎಂಬ ಅಲಿಖಿತ ನೀತಿಯನ್ನು ನಮ್ಮಲ್ಲಿ ಕುಟುಂಬವ್ಯವಸ್ಥೆಗಳು ನಿರ್ವಹಿಸಿಕೊಂಡು ಬರುತ್ತಿವೆ.

ಋತುಚಕ್ರದ ಸಂದರ್ಭದಲ್ಲಿನ ರಕ್ತಸ್ರಾವವು ಎರಡರಿಂದ ಏಳು ದಿನಗಳ ಕಾಲ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗಿರುವುದು, ಮಹಿಳೆ ಮನೆಯೊಳಗೂ, ಮನೆಹೊರಗೂ ದುಡಿಯುತ್ತಿರುವುದರಿಂದ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ. ರಾಜ್ಯ ಸರ್ಕಾರ ಋತುಚಕ್ರ ನೀತಿಯ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ ಹನ್ನೆರಡು ದಿನ ವೇತನಸಹಿತ ರಜೆಯನ್ನು ಘೋಷಿಸುವ ಮೂಲಕ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಬಹುತೇಕ ಮಹಿಳಾ ಉದ್ಯೋಗಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಋತುಚಕ್ರದ ದಿನಗಳ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಉದ್ಯೋಗ ಮಾಡುವ ಸ್ಥಳದ ಮೂಲಭೂತ ಅಂಶವೆಂದು ಪರಿಗಣಿಸಿ, ಅದರ ಮಹತ್ವವನ್ನು ಗುರುತಿಸುವ ರೂಪದಲ್ಲಿ ಋತುಚಕ್ರದ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ವಿಷಯದ ಬಗ್ಗೆ ಸರ್ಕಾರಿ ವಲಯದಲ್ಲಿ ಕಳೆದೊಂದು ವರ್ಷದಿಂದ ವಿಚಾರ ವಿಮರ್ಶೆ ನಡೆಯುತ್ತಿತ್ತು. ಅಧ್ಯಯನಕ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಾಧಕ-ಬಾಧಕಗಳನ್ನು ಅವಲೋಕಿಸಿ, ಬೇರೆ-ಬೇರೆ ಇಲಾಖೆಗಳ ಜತೆ ರ್ಚಚಿಸಿ, ಕಾರ್ವಿುಕ ಇಲಾಖೆ ಈ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ. ಒಟ್ಟಾರೆ, ಸರ್ಕಾರ ಈ ಮೂಲಕ ಪ್ರಗತಿಪರ ಹೆಜ್ಜೆಯನ್ನು ಇರಿಸಿದ್ದು, ಈ ನೀತಿಯ ಪರಿಣಾಮಕಾರಿ ಅನುಷ್ಠಾನದ ಹೊಣೆಗಾರಿಕೆಯನ್ನೂ ನಿರ್ವಹಿಸಬೇಕಿದೆ.

ದೇಶಕ್ಕೆ ಒಂದೇ ಕಾನೂನಿಲ್ಲ

ಮುಟ್ಟಿನ ಅವಧಿಯಲ್ಲಿ ರಜೆ ನೀಡಬೇಕು ಎಂಬ ಚರ್ಚೆ ದೇಶದಲ್ಲಿ ಹಲವು ಬಾರಿ ನಡೆದಿದೆ. ಕೆಲವರು ಇದರ ಪರ ವಹಿಸಿದರೆ, ಇನ್ನು ಕೆಲವರು ಕೆಲಸಕ್ಕೆ, ಉತ್ಪಾದಕತೆಗೆ ತೊಂದರೆಯಾಗುತ್ತದೆ ಎಂಬ ಸಬೂಬು ನೀಡಿದರು. ಹೀಗಾಗಿ, ಈವರೆಗೆ ದೇಶದಲ್ಲಿ ಈ ಬಗ್ಗೆ ಸ್ಪಷ್ಟ ನೀತಿಯನ್ನು ಮತ್ತು ಕಾನೂನನ್ನು ರೂಪಿಸಲು ಸಾಧ್ಯವಾಗಿಲ್ಲ. ಸಂಸತ್ತಿನಲ್ಲಿ ಈ ಕುರಿತಾದ ಮಸೂದೆ ಮಂಡನೆ ಜಾರಿಗೆ ಯತ್ನಿಸಿದರೂ, ಅದು ಯಶಸ್ವಿಯಾಗಿಲ್ಲ. 2017 ರಲ್ಲಿ Menstruation benefits bill, 2018ರಲ್ಲಿ women's sexual reproductive and menstrual rights bill 2022ರಲ್ಲಿ Right of Women to Menstrual Leave and Free Access to Menstrual Health Products Bill ಮಂಡನೆಯಾದರೂ, ಈವರೆಗೆ ಕಾನೂನಿನ ರೂಪ ಪಡೆದುಕೊಂಡಿಲ್ಲ.

ಬಿಹಾರ ಮೊದಲು

ದೇಶದಲ್ಲಿ ಮುಟ್ಟಿನ ರಜೆಯನ್ನು ಸರ್ಕಾರಿ ವಲಯದಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯ ಬಿಹಾರ. ಜನತಾ ದಳದಿಂದ ಮುಖ್ಯಮಂತ್ರಿಯಾಗಿದ್ದ ಈಗಿನ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 1992ರಲ್ಲಿ ಈ ನೀತಿಯನ್ನು ಜಾರಿಗೊಳಿಸಿ, ತಿಂಗಳಿಗೆ ಎರಡು ವೇತನಸಹಿತ ರಜೆಯನ್ನು ಮಂಜೂರು ಮಾಡಿದರು. ಇದು ಮಹಿಳಾಪರ ನಿರ್ಧಾರವಾಗಿದ್ದರಿಂದ ಮುಂದೆ ಬಂದ ಸರ್ಕಾರಗಳು ಕೂಡ ಮುಂದುವರಿಸಿಕೊಂಡು ಬಂದಿವೆ.

ಒಡಿಶಾದಲ್ಲೂ ಇದೆ

ಬುಡಕಟ್ಟು ಸಮುದಾಯದ ಜನಸಂಖ್ಯೆ ಗಮನಾರ್ಹವಾಗಿರುವ ಒಡಿಶಾದಲ್ಲಿ ಕೂಡ ಮಹಿಳೆಯರ ಘನತೆ ರಕ್ಷಿಸುವ ಉದ್ದೇಶದಿಂದ ತಿಂಗಳಿಗೆ 1 ದಿನ ಮುಟ್ಟಿನ ರಜೆಯನ್ನು ನೀಡಲಾ ಗುತ್ತಿದೆ. 2022ರಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಸರ್ಕಾರಿ ವಲಯದಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ಇದು ಅನ್ವಯವಾಗಿದ್ದು, ಖಾಸಗಿ ವಲಯಕ್ಕೆ ಇನ್ನೂ ವಿಸ್ತರಿಸಲಾಗಿಲ್ಲ.

ವಿದ್ಯಾರ್ಥಿನಿಯರಿಗೆ

ಕೇರಳದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ಇನ್ನೂ ಜಾರಿಗೆ ಬಂದಿಲ್ಲ. ಆದರೆ, ವಿಶ್ವವಿದ್ಯಾಲಯ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಈ ರಜೆ ಸೌಲಭ್ಯವನ್ನು 2023ರಿಂದ ನೀಡಲಾಗುತ್ತಿದೆ.

ಶೀಘ್ರ ನಿಯಮ ಜಾರಿ

ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಜಾರಿ ಮಾಡಲು ಶೀಘ್ರ ನಿಯಮ ರೂಪಿಸಲಾಗುವುದು ಎಂದು ಕಾರ್ವಿುಕ ಸಚಿವ ಸಂತೋಷ್ ಲಾಡ್ ಶನಿವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಸರ್ಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇ ಬೇಕು. ಈ ನೀತಿ ಜಾರಿ ಸಂಬಂಧ ಮಸೂದೆ ಮಂಡಿಸಲಾಗುವುದು ಅಥವಾ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದಿದ್ದಾರೆ. ಅಲ್ಲದೆ, ಕಂಪನಿಗಳು ಇದನ್ನು ಕೇವಲ ಒಂದು ಕಾನೂನಿನ ದೃಷ್ಟಿಯಲ್ಲಿ ನೋಡದೆ, ಮಾನವೀಯ ದೃಷ್ಟಿಯಿಂದಲೂ ನೋಡಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿಗಳು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಬದಲಾಗಬೇಕಿದೆ ಮನೋಭಾವ

ಈಗಲೂ ಹೆಣ್ಣಿನ ಋತುಚಕ್ರದ ಬಗ್ಗೆ ಸಮಾಜದಲ್ಲಿ ಪೂರ್ವಗ್ರಹಗಳಿವೆ. ಮುಟ್ಟು ಎಂಬುದು ಹೆಣ್ಣಿನ ದೈಹಿಕ ಬದಲಾವಣೆ. ಆದರೆ, ಅದನ್ನು ಮೈಲಿಗೆಯ ರೂಪದಲ್ಲಿ ನೋಡಲಾಗುತ್ತದೆ. ಕೆಲವಡೆ ಮಹಿಳೆಯರನ್ನು ಅಪಹಾಸ್ಯ ಮಾಡುವ ಕೆಟ್ಟ ಮಾನಸಿಕತೆಯೂ ಇದೆ. ಹೀಗಾಗಿ ಈ ವಿಷಯದ ಬಗ್ಗೆ ಸಂವೇದನೆ ಹಾಗೂ ಗೌರವದಿಂದ ವರ್ತಿಸುವುದು ಅಗತ್ಯವಾಗಿದ್ದು, ಮನೋಭಾವ ಬದಲಾಗಬೇಕಿದೆ. ಆಗ ಮಾತ್ರ ಮಹಿಳೆಯ ಹಕ್ಕು ಮತ್ತು ಘನತೆಯನ್ನು ರಕ್ಷಿಸಿದಂತೆ.

ಸವಾಲೂ ಇದೆ

ಸರ್ಕಾರವೇನೋ ತಿಂಗಳಿಗೆ ಒಂದು ದಿನ ವೇತನಸಹಿತ ರಜೆಯನ್ನು ಮಂಜೂರು ಮಾಡಿದೆ. ಆದರೆ, ಖಾಸಗಿ ವಲಯ ಇದನ್ನು ಎಷ್ಟು ಪರಿಣಾಮಕಾರಿಯಾಗಿ ಪಾಲಿಸುತ್ತದೆ ಎಂಬ ಪ್ರಶ್ನೆಯೂ ಇದೆ. ಖಾಸಗಿ ವಲಯದಲ್ಲಿ ಕೆಲಸದ ಒತ್ತಡ, ಗುರಿ (ಟಾರ್ಗೆಟ್) ಮುಟ್ಟುವ ಧಾವಂತ, ತೀವ್ರ ಸ್ಪರ್ಧಾತ್ಮಕತೆಯ ವಾತಾವರಣವಿದ್ದು, ಈಗಾಗಲೇ ಲಭ್ಯವಿರುವ ರಜೆಗಳೇ ಸರಿಯಾಗಿ ಸಿಗುತ್ತಿಲ್ಲ ಎಂಬಂಥ ಸ್ಥಿತಿ ಇದೆ. ಹೀಗಿರುವಾಗ ಮುಟ್ಟಿನ ರಜೆಯನ್ನು ನೀಡಲು ಹಿಂಜರಿಕೆ ತೋರಿದರೆ ಅಥವಾ ನಿರಾಕರಿಸಿದರೆ ಮಹಿಳೆಯರ ಗೋಳು ತಪ್ಪಿದ್ದಲ್ಲ. ಕೆಲ ಕಂಪನಿಗಳು ಅದರಲ್ಲೂ ಸಣ್ಣ ಉದ್ಯಮಗಳಲ್ಲಿ, ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿ ರಜೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ನೇಮಕ ಮಾಡಲು ಹಿಂಜರಿಯಬಹುದು. ಪುರುಷಪ್ರಧಾನ ಉದ್ಯೋಗವಲಯದಲ್ಲಿ ಮಹಿಳೆ ತನ್ನ ಹಕ್ಕಿನ ರಜೆ ಪಡೆಯಲು ಹಿಂಜರಿಕೆ ಪಡುವಂತಾಗಬಾರದು. ಉದ್ಯೋಗ ಸ್ಥಳದಲ್ಲಿ ತಾರತಮ್ಯ ಅಥವಾ ವೃತ್ತಿಪರ ಅವಕಾಶ ನಿರಾಕರಣೆಗೆ ಕಾರಣವಾಗದಂತೆ ವಿವೇಕದಿಂದ, ಮಾನವೀಯತೆಯಿಂದ ನಡೆದುಕೊಳ್ಳಬೇಕಿದೆ.

ಯಾರಿಗೆಲ್ಲ ಅನ್ವಯ?

ರಾಜ್ಯ ಸರ್ಕಾರಿ, ಬಹುರಾಷ್ಟ್ರೀಯ ಕಂಪನಿಗಳು, ಸಿದ್ಧ ಉಡುಪು ವಲಯ (ಗಾರ್ವೆಂಟ್ಸ್), ಮಾಹಿತಿ- ತಂತ್ರ ಜ್ಞಾನ, ಜೈವಿಕ- ತಂತ್ರಜ್ಞಾನ ಸೇರಿ ದಂತೆ, ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲ ವಲಯಗಳಿಗೂ ಅನ್ವಯ.

ಕರ್ನಾಟಕದಲ್ಲಿ 60 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ಇದರಿಂದ ಪ್ರಯೋಜನವಾಗಲಿದೆ. ಈ ಪೈಕಿ 25-30 ಲಕ್ಷ ಮಹಿಳೆಯರು ಕಾಪೋರೇಟ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಮಹಿಳಾಪರ ನೀತಿಗಳು

  • ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ.
  • ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮಿ’ ಯೋಜನೆ.
  • ಋತುಚಕ್ರ ನೀತಿಯ ಮೂಲಕ ಮುಟ್ಟಿನ ರಜೆ.

ಪ್ರಯೋಜನಗಳು

  • ಮಹಿಳೆಯರ ಆರೋಗ್ಯ ರಕ್ಷಣೆಗೆ ಸಹಕಾರಿ.
  • ಉದ್ಯೋಗಸ್ಥ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ.
  • ವನಿತೆಯರ ಘನತೆ ಎತ್ತಿ ಹಿಡಿಯಲು ಪೂರಕ.
  • ಒಂದಿಷ್ಟು ವಿಶ್ರಾಂತಿ ಪಡೆದು, ಉತ್ಸಾಹ ದೊಂದಿಗೆ ಕೆಲಸಕ್ಕೆ ಮರಳಲು ಅವಕಾಶ.
  • ಹೆಣ್ಣಿನ ಋತುಚಕ್ರದ ಬಗ್ಗೆ ಸಾರ್ವಜನಿಕ ಸಂವೇದನೆ ರೂಪಿಸುವ ನಿಟ್ಟಿನಲ್ಲಿ ಪೂರಕ.

ಮುಟ್ಟಿನ ರಜೆ ನೀತಿಯನ್ನು ಈಗಾಗಲೇ ಜಾರಿಗೆ ತಂದಿರುವ ಖಾಸಗಿ ಕಂಪನಿಗಳು

  • ಫುಡ್ ಡೆಲಿವರಿ ಕಂಪನಿ ಝೊಮ್ಯಾಟೋ 2020ರ ಆಗಸ್ಟ್​ನಿಂದ ತನ್ನ ಮಹಿಳಾ ಸಿಬ್ಬಂದಿಗೆ ವರ್ಷಕ್ಕೆ 10 ಮುಟ್ಟಿನ ರಜೆಗಳನ್ನು ನೀಡುತ್ತಿದೆ.
  • ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಐವಿಪಣನ್ ತನ್ನ ಮಹಿಳಾ ಸಿಬ್ಬಂದಿಗೆ 2020ರ ಆಗಸ್ಟ್​ನಿಂದ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡುತ್ತಿದೆ.
  • ಆನ್​ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ ತಿಂಗಳಿಗೆ ವೇತನಸಹಿತ ಎರಡು ರಜೆ ನೀಡುತ್ತಿದೆ.
  • ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಗೊಜೂಪ್ ತಿಂಗಳಿಗೆ 1 ವೇತನಸಹಿತ ರಜೆ ಸೌಲಭ್ಯ ಒದಗಿಸಿದೆ.

ಸರ್ಕಾರದ ಈ ನಡೆ ಉತ್ತಮವಾಗಿದೆ. ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಉಂಟಾಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು, ನೋವು ಕಿರಿಕಿರಿಯಿಂದಾಗಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಕಷ್ಟವಾಗಿತ್ತು. ಈಗ ರಾಜ್ಯ ಸರ್ಕಾರ ತಂದಿರುವ ಈ ನಿರ್ಧಾರ ಪ್ರಶಂಸನೀಯವಾಗಿದೆ. ಮುಟ್ಟಿನ ಬಗ್ಗೆ ಸಮಾಜಕ್ಕಿರುವ ಹಿಂಜರಿಕೆಗಳನ್ನು ಹೊಗಲಾಡಿಸಿ. ಪ್ರತಿ ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ವಹಿಸಬಹುದು. | ಡಾ.ಎನ್.ಮಂಜುಳಾ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net