

ಮುಂಗಾರಿನ ಆರಂಭದಲ್ಲೇ ಈಶಾನ್ಯ ರಾಜ್ಯಗಳು ಭಾರಿ ಮಳೆಗೆ ತತ್ತರಿಸಿವೆ. ವಾಡಿಕೆಗಿಂತ ಅಧಿಕ ಮಳೆ ಸುರಿದಿದ್ದು ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ. ಪರಿಣಾಮ, ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿ ದೊಡ್ಡಪ್ರಮಾಣದಲ್ಲಿ ಆಗಿದೆ. ಮಣಿಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಒಡ್ಡುಗಳು ಒಡೆದು ಹಠಾತ್ ಪ್ರವಾಹ ಸಂಭವಿಸಿದೆ. ಪರಿಣಾಮ 56 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, 10,447 ಮನೆಗಳು ಹಾನಿಗೀಡಾಗಿವೆ. ಪ್ರವಾಹ ಪೀಡಿತ ಪ್ರದೇಶದಿಂದ 2,914 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಿರಾಶ್ರಿತರಿಗಾಗಿ 57 ಶಿಬಿರಗಳನ್ನು ತೆರೆಯಲಾಗಿದೆ. ಕಳೆದ ಐದು ದಿನಗಳಲ್ಲೇ ರಾಜ್ಯಾದ್ಯಂತ 93 ಕಡೆ ಭೂಕುಸಿತ ಸಂಭವಿಸಿದೆ ಎಂದು ಸರ್ಕಾರ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರಾದಲ್ಲೂ ಸ್ಥಿತಿ ಭಿನ್ನವಾಗಿಲ್ಲ. ಜೂನ್ 1ರಿಂದ 3ರವರೆಗಿನ ಅವಧಿಯಲ್ಲೇ 36ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಪ್ರಮುಖ 10 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹ ಮತ್ತು ಭೂಕುಸಿತದ ಪರಿಣಾಮ ರಸ್ತೆ ಮತ್ತು ರೈಲ್ವೆ ಸಾರಿಗೆ ಸೇವೆಯಲ್ಲಿ ವ್ಯತ್ಯಯಗಳು ಉಂಟಾಗಿವೆ. ಅಸ್ಸಾಂನಲ್ಲಿ ಪ್ರವಾಹದಿಂದ 5 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಶಾನ್ಯದ ಏಳೂ ರಾಜ್ಯಗಳಲ್ಲಿ ಭೂಕುಸಿತದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ. ತಜ್ಞರ ಸಮಿತಿಯ ಮೂಲಕ ಇದಕ್ಕೆ ಸೂಕ್ತ ಕಾರಣ ಪತ್ತೆ ಹಚ್ಚಿ, ಪರಿಹಾರೋಪಾಯ ಕಂಡುಕೊಳ್ಳಬೇಕು. ಭೂಕುಸಿತದಿಂದ ಪ್ರಾಣಹಾನಿ, ಆಸ್ತಿಹಾನಿ ಪ್ರಮಾಣ ಜಾಸ್ತಿಯಾಗುತ್ತಿದೆ. ಅಲ್ಲದೆ, ಸಾವಿರಾರು ಜನರ ಬದುಕು ಅತಂತ್ರ ಸ್ಥಿತಿಗೆ ಸಿಲುಕಿದೆ. ಮಳೆಗಾಲದ ಆರಂಭದಲ್ಲೇ ಈ ಸ್ಥಿತಿ ಸೃಷ್ಟಿಯಾಗಿದ್ದು, ಮುಂಬರುವ ದಿನಗಳನ್ನು ಎದುರಿಸಲು, ಹಾನಿಯ ಪ್ರಮಾಣ ತಗ್ಗಿಸಲು ಆಡಳಿತ ವ್ಯವಸ್ಥೆ ಸನ್ನದ್ಧವಾಗಬೇಕಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ವ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮಸಿಂಗ್ ತಮಾಂಗ್ ಮತ್ತು ಮಣಿಪುರದ ರಾಜ್ಯಪಾಲ ಅಜಯ್ ಭಲ್ಲಾರೊಂದಿಗೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಆ ರಾಜ್ಯಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ವಿಳಂಬವಿಲ್ಲದೆ ಮೊದಲು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಆಹಾರ ಸಾಮಗ್ರಿ, ಬೆಚ್ಚನೆಯ ಉಡುಪುಗಳು, ಶುದ್ಧ ಕುಡಿಯುವ ನೀರು, ಹೊದಿಕೆ, ಔಷಧಗಳ ಪೂರೈಕೆ ಸಮರೋಪಾದಿಯಲ್ಲಿ ನಡೆಯಬೇಕು. ಅಲ್ಲದೆ, ಮಳೆಯಿಂದ ಹಾನಿಗೊಳಗಾದ ಈಶಾನ್ಯ ರಾಜ್ಯಗಳ ಜನರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಅಗತ್ಯ ನೆರವನ್ನು ನೀಡಬೇಕು. ಸಂಭಾವ್ಯ ಭೂಕುಸಿತದ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಪರಿಹಾರ ಕಾರ್ಯ, ಜನರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಂಕಷ್ಟದ ಸಮಯವನ್ನು ಮೀರಿ ನಿಲ್ಲಬೇಕಿದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.