

| ರಮೇಶ್ ಮೈಸೂರು ಬೆಂಗಳೂರು
ಲಕ್ಷಗಟ್ಟಲೆ ಶುಲ್ಕ ತೆತ್ತು ವೃತ್ತಿಪರ ಕೋರ್ಸ್ಗಳಿಗೆ ಸೇರಿ ಇಂಜಿನಿಯರಿಂಗ್ ಮುಗಿಸಿದರೂ ಯಾವುದೇ ಸಂಸ್ಥೆಗಳು ಉದ್ಯೋಗದ ಖಾತರಿ ನೀಡುವುದಿಲ್ಲ. ಈ ಕಹಿ ಸತ್ಯದ ನಡುವೆಯೂ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ ಸಿಕ್ಕಿದೆ.
ಪದವಿ, ಡಿಪ್ಲೊಮಾ ಬಳಿಕ ಅಪ್ರೆಂಟಿಸ್ಶಿಪ್ ಪೂರೈಸುವುದು ಈವರೆಗೆ ವಿದ್ಯಾರ್ಥಿಗಳ ಬಾಧ್ಯತೆ ಆಗಿತ್ತು. ಇದಕ್ಕಾಗಿ ಮತ್ತೊಂದು ವರ್ಷ ವ್ಯಯಿಸಬೇಕಿತ್ತು. ಆದರೆ, ಇನ್ನುಮುಂದೆ ಅಪ್ರೆಂಟಿಸ್ಶಿಪ್ (ಶಿಶುಕ್ಷು ತರಬೇತಿ) ಕೋರ್ಸ್ನ ಭಾಗವೇ ಆಗಿರಲಿದ್ದು, ವ್ಯಾಸಂಗದ ಅವಧಿಯಲ್ಲೇ ಹಣ ಸಂಪಾದನೆಗೂ ಅವಕಾಶ ದೊರೆಯಲಿದೆ. ಆ ಮೂಲಕ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ಭಾರಿ ಪ್ರಯೋಜನವಾಗಬಲ್ಲ ಕೋರ್ಸ್ ಮಾದರಿಯನ್ನು ರೂಪಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾರ್ಗಸೂಚಿಗಳನ್ನು ಹೊರಡಿಸಿದೆ. ಪದವಿ ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್ ಬಳಿಕ ಹಾಗೂ ಡಿಪ್ಲೊಮಾದವರಿಗೆ 2ನೇ ಸೆಮಿಸ್ಟರ್ ನಂತರ ಅಪ್ರೆಂಟಿಸ್ಶಿಪ್ ಕೈಗೊಳ್ಳಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಕೂಡ ದೊರೆಯಲಿದೆ.
ಹೇಗೆ ವಿದ್ಯಾರ್ಥಿಗಳಿಗೆ ಲಾಭ?: ಸಾಂಪ್ರದಾಯಿಕ ಪದವಿಗಿಂತ ಶಿಶುಕ್ಷು ತರಬೇತಿಯೊಂದಿಗಿನ ಪದವಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದು ಶೇ.92 ವಿಶ್ವವಿದ್ಯಾಲಯಗಳ ಅಭಿಪ್ರಾಯವಾಗಿದೆ. ನೀತಿ ಆಯೋಗದ ಮಾಹಿತಿ ಪ್ರಕಾರ ಅಪ್ರೆಂಟಿಸ್ಶಿಪ್ ಮುಗಿಸಿದ ಶೇ.79 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿದ್ದಾರೆ. ಈ ಕಾರಣಕ್ಕಾಗಿ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಜತೆಗೆ ಅಪ್ರೆಂಟಿಸ್ಶಿಪ್ಅನ್ನು ಅವಿಭಾಜ್ಯ ಅಂಗವಾಗಿಸಲಾಗುತ್ತಿದೆ.
ಭರಿಸುವುದು ಯಾರು?: ಅಪ್ರೆಂಟಿಸ್ಶಿಪ್ ಮೊತ್ತದ ಪೈಕಿ ಅರ್ಧವನ್ನು ಕೇಂದ್ರ ಸರ್ಕಾರ ಭರಿಸಿದರೆ, ಇನ್ನರ್ಧವನ್ನು ಆಯಾ ಸಂಸ್ಥೆ, ಕೈಗಾರಿಕೆಗಳು ಭರಿಸಲಿವೆ. ಸ್ಟೈಪೆಂಡ್ ಹೊರತಾಗಿಯೂ ಕಾಲೇಜುಗಳು ಉದ್ಯೋಗ ತರಬೇತಿಗೆ ವಿವಿಧ ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.
ಉದ್ಯೋಗ ತರಬೇತಿ ಅವಧಿ?: ಕೋರ್ಸ್ನಲ್ಲಿ ಕನಿಷ್ಠ 1 ಸೆಮಿಸ್ಟರ್ ಅವಧಿ ಯನ್ನಾದರೂ ಅಪ್ರೆಂಟಿಸ್ಶಿಪ್ಗೆ ಮೀಸಲಿಡಬೇಕು. ಇದು ಆಯಾ ಶಿಕ್ಷಣ ಸಂಸ್ಥೆ, ವಿವಿ ನಿಯಮಗಳನ್ನು ಆಧರಿಸಿ ಬದಲಾಗಬಹುದು. ಆದರೆ, ಡಿಪ್ಲೊಮಾಗೆ ಗರಿಷ್ಠ 2 ಸೆಮಿಸ್ಟರ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ
ಗರಿಷ್ಠ 3 ಸೆಮಿಸ್ಟರ್ ಅಪ್ರೆಂಟಿಸ್ಶಿಪ್ ಒದಗಿಸಬಹುದು. ಆದರೆ, ಒಂದು ಬಾರಿ ಉದ್ಯೋಗ ತರಬೇತಿ ಆರಂಭವಾದಲ್ಲಿ ಕನಿಷ್ಠ ಆರು ತಿಂಗಳ ಅವಧಿಗೆ ಮುಂದುವರಿಯತಕ್ಕದ್ದು ಅಥವಾ ಒಂದು ವರ್ಷಕ್ಕಿಂತ ಹೆಚ್ಚಿರಬಾರದು. ಡಿಪ್ಲೊಮಾದಲ್ಲಿ 2ನೇ ಸೆಮಿಸ್ಟರ್ ಬಳಿಕ, ಪದವಿಯಲ್ಲಿ 3ನೇ ಸೆಮಿಸ್ಟರ್ ನಂತರ ಅಪ್ರೆಂಟಿಸ್ಶಿಪ್ಗೆ ಅವಕಾಶ ನೀಡುವುದು ಸೂಕ್ತ ಎಂಬ ಸಲಹೆ ಸಮಿತಿಯದ್ದಾಗಿದೆ.
ತ್ರೀಪಕ್ಷೀಯ ಒಪ್ಪಂದ: ಶಿಶುಕ್ಷು ತರಬೇತಿ ನೀಡಲು ಶಿಕ್ಷಣ ಸಂಸ್ಥೆ, ತರಬೇತಿ ಸಂಸ್ಥೆ ಹಾಗೂ ತರಬೇತಿಗೊಳಪಡುವ ವಿದ್ಯಾರ್ಥಿಯನ್ನು ಒಳಗೊಂಡಂತೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.
ಮೌಲ್ಯಮಾಪನವೂ ಇದೆ : ಒಟ್ಟಾರೆ ಮೂರು ಹಂತದ ಮೌಲ್ಯಮಾಪನಗಳನ್ನು ಸೂಚಿಸಲಾಗಿದೆ. ಕೈಗಾರಿಕೆಗಳಿಂದ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪ್ರಾಧ್ಯಾಪಕರಿಂದ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದ್ದರೂ, ಇದು ಐಚ್ಛಿಕವಾಗಿದೆ. ಆದರೆ, ಮೂರನೆಯದಾಗಿ ಸೆಮಿನಾರ್ ಮೂಲಕ ಪ್ರಸ್ತುತಿ ಹಾಗೂ ಮೌಖಿಕ ಸಂದರ್ಶನದ ಮೂಲಕ ಮೌಲ್ಯಮಾಪನ ನಡೆಸುವುದು. ಈ ಮೂಲಕ ಕೈಗಾರಿಕೆ ಹಾಗೂ ಸಂಸ್ಥೆಗಳು ನೀಡುವ ಅಂಕವನ್ನು ಸರಾಸರಿ ರೂಪದಲ್ಲಿ ವಿದ್ಯಾರ್ಥಿಯ ಅಂತಿಮ ಗ್ರೇಡ್ ನಿರ್ಧರಿಸಲು ಬಳಸುವುದು.ತರಬೇತಿಗೆ ಕ್ರೆಡಿಟ್ ಅಂಕಗಳನ್ನು ನಿಗದಿ ಮಾಡಲಾಗಿದೆ.
. ಕೈಗಾರಿಕೆಗೆ: ಉದ್ಯೋಗಕ್ಕೆ ಸಜ್ಜಾದ ಅಭ್ಯರ್ಥಿಗಳು ಲಭ್ಯವಾಗುತ್ತಾರೆ. ವರ್ಷಗಳ ಅವಧಿಗೆ ಮಾನವ ಸಂಪನ್ಮೂಲ, ವಿದ್ಯಾರ್ಥಿಗಳು ಸಮಸ್ಯೆಗೆ ಪರಿಹಾರಕ್ಕೆ ವಿಶೇಷ ಆಯಾಮ ನೀಡುತ್ತಾರೆ. ತಾತ್ಕಾಲಿಕ ಪ್ರಾಜೆಕ್ಟ್ಗಳಿಗೆ ಗುಣಮಟ್ಟದ ವಿದ್ಯಾರ್ಥಿಗಳು ದೊರೆಯುತ್ತಾರೆ. ಸಂಭಾವ್ಯ ಉದ್ಯೋಗಿಗಳನ್ನು ಗುರುತಿಸಿ ನೇಮಕಾತಿ ಮಾಡಿಕೊಳ್ಳಲು ಅನುಕೂಲ
. ವಿದ್ಯಾರ್ಥಿಗಳಿಗೆ: ಉದ್ಯಮ ಅಥವಾ ಕೈಗಾರಿಕೆಗಳಿಂದ ನೇಮಕಾತಿ ಅವಕಾಶ. ಪ್ರಾಯೋಗಿಕ ತರಬೇತಿ ದೊರೆಯುತ್ತದೆ. ತಾತ್ವಿಕವಾಗಿ ಕಲಿತದ್ದು ಪ್ರಾಯೋಗಿಕವಾಗಿ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ತಿಳಿಯುವ ಅವಕಾಶ. ವೃತ್ತಿ ನಿರ್ಧಾರ ಕೈಗೊಳ್ಳಲು ಸಹಾಯಕ.
. ಶಿಕ್ಷಣ ಸಂಸ್ಥೆಗಳಿಗೆ: ಕೈಗಾರಿಕೆಗಳೊಂದಿಗೆ ಬಾಂಧವ್ಯ ಬೆಳೆಯುತ್ತದೆ. ಪ್ಲೇಸ್ವೆುಂಟ್ ಪ್ರಕ್ರಿಯೆಗಳನ್ನು ಸರಾಗಗೊಳಿಸುತ್ತದೆ. ಸಂಸ್ಥೆಯ ವಿಶ್ವಾಸಾರ್ಹತೆ ಹಾಗೂ ಇಮೇಜ್ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ.
ತರಬೇತಿ ನಂತರ?: ವಿದ್ಯಾರ್ಥಿಗಳ ತರಬೇತಿ ನಂತರ ಕನಿಷ್ಠ ಒಂದು ವರ್ಷದ ಅವಧಿಗೆ ಕಾರ್ಯಕ್ರಮದ ಫಲಿತಾಂಶ ಅವಲೋಕನ ಮಾಡಬೇಕು. ಶಿಕ್ಷಣದ ನಂತರವೂ ಪ್ರಾಯೋಗಿಕ ತರಬೇತಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಸಮಿತಿಯಲ್ಲಿ ಯಾರಿದ್ದರು?: ಶಿಶುಕ್ಷು ತರಬೇತಿ ಒಳಗೊಂಡಂತೆ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ರೂಪಿಸಲು ಕೇಂದ್ರ ಸರ್ಕಾರವು 2023ರ ಜೂ.6ರಂದು ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಂ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಇದರಲ್ಲಿ ಆರು ಸದಸ್ಯರಿದ್ದು, ಎಐಸಿಟಿಇ ಉಪ ನಿರ್ದೇಶಕರಾದ ಡಾ. ನೀತು ಭಗತ್ ಸಂಚಾಲಕರಾಗಿದ್ದರು.
. 2019ರಲ್ಲಿ ಮಹತ್ವದ ಸಮೀಕ್ಷೆ ನಡೆಸಿದ್ದ ನಾಸ್ಕಾಂ
. 15 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮೀಕ್ಷೆ
. ಈ ಪೈಕಿ 2.5 ಲಕ್ಷ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿತ್ತು
. ಆಸ್ಪೈರಿಂಗ್ ಕೂಡ ಮತ್ತೊಂದು ಸಮೀಕ್ಷೆ ನಡೆಸಿತ್ತು
. ಶೇ.80 ಇಂಜಿನಿಯರ್ಗಳು ನಿರುದ್ಯೋಗಿಗಳಾಗಿದ್ದರು
. ಡಿಪ್ಲೊಮಾಗೆ 2ನೇ, ಪದವಿಗೆ 3ನೇ ಸೆಮಿಸ್ಟರ್ ಬಳಿಕ ಉದ್ಯೋಗ ತರಬೇತಿಎಷ್ಟು ವೇತನ?. ಡಿಪ್ಲೊಮಾಗೆ ಮಾಸಿಕ 7 ಸಾವಿರ, ಪದವೀಧರರಿಗೆ 8 ಸಾವಿರ ರೂ. ಸ್ಟೈಫಂಡ್
ಯಾರಿಗೆ ಅನ್ವಯ?
. ಪದವಿ, ಡಿಪ್ಲೊಮಾ ಸೇರಿ ಎಲ್ಲ ತಾಂತ್ರಿಕ ಶಿಕ್ಷಣಕೋರ್ಸ್ಗಳಿಗೂ ಅನ್ವಯ