ಕೆಆರ್‌ಐಡಿಎಲ್ ಕಾಮಗಾರಿ ಮೇಲ್ವಿಚಾರಣೆಗೆ ಇಂಜಿನಿಯರ್‌ಗಳ ನೇಮಕ: ಸಿಎಂ ಸೂಚನೆ

Sports meeting
Published on

ಬೆಂಗಳೂರು: ರಾಜ್ಯದ ವಿವಿಧ ತಾಲೂಕುಗಳಲ್ಲಿ ಕರ್ನಾಟಕ ಮೂಲಸವಲತ್ತು ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕೈಗೆತ್ತಿಕೊಂಡಿರುವ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿವೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ಮೇಲ್ವಿಚಾರಣೆಗೆ ಇಬ್ಬರು ಇಂಜಿನಿಯರ್‌ಗಳ ನೇಮಕಕ್ಕೆ ಸೂಚಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಗತಿಯನ್ನು ಸಿಎಂ ಸಿದ್ದರಾಮಯ್ಯ ಮಂಗಳವಾರ ಪರಾಮರ್ಶಿಸಿದರು. ಇದೇ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಕಾರ್ಯವೈಖರಿ ಬಗ್ಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ವಿವರಿಸಿ, ಟೆಂಡರ್ ಕರೆಯದೆ ಕೈಗೊಂಡ ಕಾಮಗಾರಿ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ.

ವಿಜಯನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿ 120 ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣಗಳಿಲ್ಲ. ಕಳೆದ ಐದು ವರ್ಷಗಳಿಂದ ಶೇ.95ರಷ್ಟು ಕಾಮಗಾರಿಗಳನ್ನು ಕೆಆರ್‌ಐಡಿಎಲ್ ನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಅಪರ ಮುಖ್ಯ ಕಾರ್ಯದರ್ಶಿ ನೀಡಿದ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ಎಲ್ಲ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿಯೇ ಅನುಷ್ಠಾನಗೊಳಿಸುವಂತೆ ಕಟ್ಟಪ್ಪಣೆ ಮಾಡಿದರು. ಅಲ್ಲದೆ, ಕೆಆರ್‌ಐಡಿಎಲ್ ನಿರ್ವಹಿಸುತ್ತಿರುವ ಕಾಮಗಾರಿಗಳ ಮೇಲ್ವಿಚಾರಣೆಗೆ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್ ಸೇವೆ ಪಡೆಯಲು ಸೂಚಿಸಿದರು.

ಕೋಚ್‌ಗಳ ನೇಮಕಕ್ಕೆ ಕ್ರಮ

174 ಕೋಚ್‌ಗಳ ನೇಮಕಕ್ಕೆ ಸರ್ಕಾರ ಅನುಮೋದಿಸಿದೆ. ವೃಂದ ಮತ್ತು ನೇಮಕ ನಿಯಮ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 1,486 ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಬಾಸ್ಕೆಟ್‌ಬಾಲ್ ಹಾಗು ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರೋಂಗೆ ಜಮೀನು ಗುರುತಿಸಲಾಗುತ್ತಿದೆ ಎಂದು ಇಲಾಖೆ ಶಶಿಕುಮಾರ್ ತಿಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣ ಕುರಿತು ಯಾವುದೇ ಕ್ರಮ ಆಗದಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ನಿರ್ದೇಶಿಸಿದರು.

ಪ್ರಸಕ್ತ ವರ್ಷ (2024-25)ದ ಆಯವ್ಯಯದಲ್ಲಿ ಒಂಭತ್ತು ೋಷಣೆಗಳಾಗಿವೆ. ಈ ಪೈಕಿ ಎಂಟು ೋಷಣೆಗಳಿಗೆ ಆದೇಶಗಳಾಗಿದ್ದು, ಇನ್ನೊಂದು ಆದೇಶ ಹೊರಡಿಸಲು ಸಿಎಂ ಅನುಮೋದನೆ ಕೋರಿ ಕಡತ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಆಯುಕ್ತ ಶಶಿಕುಮಾರ್ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net