

ಬೆಂಗಳೂರು: ಐದು ವರ್ಷಗಳ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅಜಿರ್ಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳ 5 ವರ್ಷದ ಅವಧಿ 2020ರ ಜೂನ್ ಬಳಿಕ ವಿವಿಧ ದಿನಾಂಕಗಳಂದು ಪೂರ್ಣಗೊಳ್ಳುತ್ತದೆ. ಅವಧಿ ಪೂರ್ಣಗೊಂಡ ಗ್ರಾಪಂಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ 2020ರ ಜೂನ್ 17ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಚಳ್ಳಕೆರೆ ತಾಲೂಕು ಸೋಮಗುದ್ದಿ ಗ್ರಾಪಂ ಅಧ್ಯಕ್ಷ ಸಿ.ಎಲ್.ಸತೀಶ್ ಬಾಬು ಸೇರಿ 16 ಮಂದಿ ತಕರಾರು ಅರ್ಜಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಇದನ್ನೂ ಓದಿರಿ ವಿಡಿಯೋ ಗೇಮ್ ಆಡ್ಬೇಡ ಅಂದ್ರೂ ಕೇಳದೆ ಸಾವಿಗೆ ಶರಣಾದ ಹೈಸ್ಕೂಲ್ ವಿದ್ಯಾರ್ಥಿ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 8ರ ಅನುಸಾರ ಆಡಳಿತಾಧಿಕಾರಿ ನೇಮಿಸಲು ಮುಂದಾಗಿರುವ ಪಂಚಾಯಿತಿಗಳ ಅವಧಿ ಈಗಾಗಲೇ ಮುಗಿದಿದೆ. ಸೆಕ್ಷನ್ 8( 4)ರ ಅನುಸಾರ ಒಂದು ಬಾರಿ ಗ್ರಾಪಂಗೆ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶವಿದೆ. ಕೋವಿಡ್ ಸೋಂಕಿರುವ ಕಾರಣ ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸಲು ಆಡಳಿತಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಮುಂದಿನ ಚುನಾಯಿತ ಪ್ರತಿನಿಧಿಗಳ ಆಯ್ಕೆ ಆಗುವವರೆಗೆ ತಮ್ಮನ್ನೇ ಮುಂದುವರಿಸಬೇಕು ಎಂಬ ಅಜಿರ್ದಾರರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಾಯ್ದೆಯ ಸೆಕ್ಷನ್ 9ರ ಅನುಸಾರ ಪಂಚಾಯಿತಿಗೆ ಚುನಾಯಿತರಾದವರ ಅವಧಿ 5 ವರ್ಷ ಮಾತ್ರ. ಅವಧಿ ಪೂರ್ಣಗೊಂಡ ನಂತರ ಚುನಾಯಿತ ಪ್ರತಿನಿಧಿ ಮುಂದುವರಿಯುವುದನ್ನು ಸಂವಿಧಾನದ ಪರಿಚ್ಛೇದ 243-ಉ ನಿರ್ಬಂಧಿಸುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಅವಧಿ ಪೂರ್ಣಗೊಂಡ ನಂತರವೂ ಅವರನ್ನು ಮುಂದುವರಿಕೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ನಿಯಮ 41 ಮತ್ತು 42ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಪಂಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ ಹೊರತು, ಸೂಚನೆ ನೀಡಿಲ್ಲ. ಆದ್ದರಿಂದ, ಸರ್ಕಾರದ ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.