ಬೆಂಗಳೂರು: (Appoint new engineers for street light maintenance) ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಯಲ್ಲಿ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಹೊಸ ಇಂಜಿನಿಯರ್‌ಗಳನ್ನು ನೇಮಿಸಬೇಕು. ಜತೆಗೆ, ವಿದ್ಯುತ್ ವಿಭಾಗದ ಅಧಿಕಾರಿಗಳಾದ ಎಚ್.ವಿ.ರಮೇಶ್,ಎಸ್. ಸಂದೀಪ್ ಸಿಂಗ್ ಅವರ ಅಮಾನತು ಅವಧಿ ತೆರವುಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ - ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್‌ಗೆ ಪತ್ರ ಬರೆದಿದೆ.
ಜಿಬಿಎ ಅನ್ನು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ನಗರದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಹಾಗೂ 369 ವಾರ್ಡ್‌ಗಳಿವೆ. ಅಂದಾಜು ಒಂದೂವರೆ ಕೋಟಿ ಜನಸಂಖ್ಯೆ ಇದೆ. ಒಂದೊಂದು ಪಾಲಿಕೆಯಲ್ಲಿ ತಲಾ ಓರ್ವ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಅಭಿಯಂತರರು ಅಥವಾ ಕಿರಿಯ ಅಭಿಯಂತರ ಮಾತ್ರ ಇಡೀ ಬೀದಿ ದೀಪಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಂಪನಿಗಳು ಮತ್ತು ಪಾಲಿಕೆ ಎಂಜಿನಿಯರ್‌ಗಳ ನಡುವಿನ ಸಮನ್ವಯತೆ ಕೊರತೆಯಿಂದ ಬೀದಿ ದೀಪ ನಿರ್ವಹಣೆಯಲ್ಲಿ ಸಾಕಷ್ಟು ಲೋಪದೋಷಗಳು ಉಂಟಾಗುತ್ತಿವೆ ಎಂದು ಸಂಘದ ಅಧ್ಯಕ್ಷ ಎ.ಅಮೃತರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು, 63 ವಾರ್ಡ್‌ಗಳು, ಅಂದಾಜು 79,152 ಬೀದಿ ದೀಪಗಳು, 3 ವಿದ್ಯುತ್ ಚಿತಾಗಾರಗಳು, ಆಸ್ಪತ್ರೆಗಳು, ಶಾಲೆ-ಕಾಲೇಜುಗಳು, ಆಟದ ಮೈದಾನ ಉದ್ಯಾನಗಳು ಸೇರಿ ವಿಧಾನ ಸೌಧ, ವಿಕಾಸ ಸೌಧ, ಹೈಕೋರ್ಟ್ ಹಾಗೂ ರಾಜಭವನದಂತಹ ಪ್ರಮುಖ ಕಚೇರಿಗಳು ಬರಲಿವೆ. ಇದರ ಜತೆಗೆ ಪಾಲಿಕೆ ಕಟ್ಟಡಗಳ ವಿದ್ಯುತ್ ನಿರ್ವಹಣೆ ಜವಾಬ್ದಾರಿಯೂ ಅಧಿಕಾರಿಗಳ ಮೇಲೆ ಇರುತ್ತದೆ. ಪ್ರಸ್ತುತ ಪಾಲಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂಜಿನಿಯರ್‌ಗಳ ಕೊರತೆ ಇದೆ. ಇದರಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಭಿಯಂತರಗಳ ಮೇಲೆ ತೀವ್ರ ಒತ್ತಡ ಇದೆ. ಸಿಬ್ಬಂದಿ ಅಭಾವದಿಂದ ಬೀದಿ ದೀಪ ನಿರ್ವಹಣೆಯು ಸಮರ್ಪಕವಾಗಿ ಆಗುತ್ತಿಲ್ಲ. ಹಾಗಾಗಿ, ಖಾಲಿ ಉಳಿದ ಹುದ್ದೆಗಳಿಗೆ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡಬೇಕು ಎಂದು ಅಮೃತ್‌ರಾಜ್ ಮನವಿ ಮಾಡಿದ್ದಾರೆ.