400 ಎಸ್‌ಐ ನೇಮಕಾತಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನ

PSI
Published on

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 400ಕ್ಕೂ ಅಧಿಕ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅರ್ಜಿ ಆಹ್ವಾನ ಮಾಡುವುದಾಗಿ ಗೃಹ ಇಲಾಖೆ ಮಾಹಿತಿ ನೀಡಿದೆ.

ಹಿರಿಯ ಐಪಿಎಸ್ ಅಧಿಕಾರಿಗಳ ವಾರ್ಷಿಕ ಸಭೆಯ ಬಳಿಕ ಡಾ.ಜಿ.ಪರಮೇಶ್ವರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಎಸ್‌ಐ ನೇಮಕಾತಿಯಲ್ಲಿ ವಿವಾದ ಮತ್ತು ಹಗರಣ ನಡೆದ ಪರಿಣಾಮ 4 ವರ್ಷದಿಂದ ನೇಮಕಾತಿ ನಡೆದಿಲ್ಲ. ಆದ್ದರಿಂದ ಶೀಘ್ರದಲ್ಲಿಯೇ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸುವುದಾಗಿ ಪರಮೇಶ್ವರ್ ತಿಳಿಸಿದ್ದಾರೆ.

ವಿವಾದಕ್ಕೆ ಒಳಗಾಗಿರುವ 545 ಎಸ್‌ಐ ಹುದ್ದೆಗಳ ನೇಮಕಾತಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಎರಡು ವಾರಗಳಲ್ಲಿ ಪ್ರಕಟಿಸಲಾಗುತ್ತದೆ. ಹೈದರಾಬಾದ್ ಕರ್ನಾಟಕದ 371ಜೆ ಮೀಸಲಾತಿ ಗೊಂದಲ ಉಂಟಾಗಿದೆ. 2020ರ ಅಧಿಸೂಚನೆ ಅನ್ವಯ ಆಯ್ಕೆಪಟ್ಟಿ ಬಿಡುಗಡೆ ಮಾಡಬೇಕೇ ಅಥವಾ 2023ರಲ್ಲಿ 371ಜೆ ಮೀಸಲಾತಿ ಕುರಿತು ಹೊರಡಿಸಿರುವ ಸುತ್ತೋಲೆ ಪ್ರಕಾರ ಆಯ್ಕೆಪಟ್ಟಿ ಪ್ರಕಟಿಸಬೇಕೇ ಎಂಬ ಗೊಂದಲವಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಡಿಪಿಎಆರ್), ಕಾನೂನು ಇಲಾಖೆ ಮತ್ತು ಗೃಹ ಇಲಾಖೆ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲಾಗಿದೆ. ಡಿಪಿಎಆರ್ ಇಲಾಖೆಯಿಂದ ಅಂತಿಮ ಅಭಿಪ್ರಾಯ ನೀಡುವಂತೆ ಕೋರಲಾಗಿದ್ದು, ಅದರ ಮೇಲೆ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಇದು ಬಾಕಿ ಇರುವ 402 ಪಿಎಸ್‌ಐ ನೇಮಕಾತಿ ಸೇರಿ ಎಲ್ಲ ಸರ್ಕಾರಿ ನೇಮಕಾತಿಗೂ ಅನ್ವಯ ಆಗಲಿದೆ ಎಂದು ಹೇಳಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸತಿ-ಪತಿ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಪಟ್ಟಿ ಸಿದ್ಧವಾಗುತ್ತಿದೆ ಎಂದು ಡಾ.ಪರಮೇಶ್ವರ್ ಮಾಹಿತಿ ನೀಡಿದರು. ಇನ್‌ಸ್ಪೆಕ್ಟರ್ ಮತ್ತು ಎಸಿಪಿ/ಡಿವೈಎಸ್‌ಪಿಗಳು ಒಮ್ಮೆ ವರ್ಗಾವಣೆಯಾದರೆ 2 ವರ್ಷ ಕಾರ್ಯಭಾರ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಅಥವಾ ರಾಜ್ಯಪತ್ರ ಹೊರಡಿಸಿದ ದಿನದಿಂದ ಅನ್ವಯ ಆಗಬೇಕೆ ಎಂಬ ಗೊಂದಲ ಇದೆ. ಇದರ ಬಗ್ಗೆಯೂ ಡಿಪಿಎಆರ್‌ನಲ್ಲಿ ಸ್ಪಷ್ಟನೆ ಕೋರಲಾಗಿದ್ದು, ಶೀಘ್ರದಲ್ಲಿಯೇ ನಿವಾರಿಸುವುದಾಗಿ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net