

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ-ಮಂಡಳಿ, ಸಂಸ್ಥೆಗಳಿಗೆ ಹೊರ ಗುತ್ತಿಗೆಯಡಿ ನೇಮಕಕ್ಕೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲು ಒದಗಿಸುವ ಅಧಿನಿಯಮ ಅನುಷ್ಠಾನಕ್ಕೆ ಬಂದಿದೆ.
ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ಅಂಗೀಕರಿಸಿದ ನಂತರ ರಾಜ್ಯ ಸರ್ಕಾರ ಮಾಡಿದ ಶಿಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪತ್ರದಲ್ಲಿ ಆ.16ರಂದು ಪ್ರಕಟವಾಗುವುದರೊಂದಿಗೆ ಕಾಯ್ದೆ ಜಾರಿಯಾಗಿದೆ.
‘ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ)’ ಅಧಿನಿಯಮ, 2024’ ಎನ್ನುವುದು ಕಾಯ್ದೆಯ ಶೀರ್ಷಿಕೆಯಾಗಿದೆ.
ರಾಜ್ಯ ಸರ್ಕಾರದ ಸೇವೆಗಳ ವೃಂದ ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳ ಯಾವುದೇ ಹುದ್ದೆಗೆ ಸರ್ಕಾರದಿಂದ ಮಾನ್ಯ ಪಡೆದ ಮಾನವಶಕ್ತಿ ಪೂರೈಕೆ ಏಜೆನ್ಸಿಯಿಂದ ನೇರ ನೇಮಕ ಕೋಟಾದ ಎದುರಿಗೆ ಮಾಡುವ ನೇಮಕಕ್ಕೆ ಮೀಸಲು ಅನ್ವಯವಾಗಲಿದೆ.
ಹುದ್ದೆಯಲ್ಲಿ ಮರು ನೇಮಕಾತಿಯಿಲ್ಲದೆ 45 ದಿನಗಳಿಗಿಂತ ಹೆಚ್ಚಲ್ಲದ ಅವಧಿಯವರೆಗೆ ಹೊಂದಿರುವ ಶಾಶ್ವತ ಹುದ್ದೆ, ಪ್ರತಿ ನೇರ ನೇಮಕ, ಹೊರ ಗುತ್ತಿಗೆ ಮೇಲಿನ ನೇರ ನೇಮಕವು ತಾತ್ಕಾಲಿಕ ಆಧಾರಿತ, ಮಂಜೂರಾದ ಹುದ್ದೆಗಳ ಶೇಕಡ 10ರಷ್ಟನ್ನು ಮೀರುವಂತಿಲ್ಲ ಮುಂತಾದ ಅಂಶಗಳು ಕಾಯ್ದೆಯಲ್ಲಿವೆ.
ಮಾನವಶಕ್ತಿ ಪೂರೈಸುವ ಏಜೆನ್ಸಿಗಳಿಗೆ ಮಾನ್ಯತೆ, ನಿಬಂಧನೆಗಳಿವೆ. ಹಾಗೆಯೇ ಜಾತಿ ಪ್ರಮಾಣಪತ್ರ ನೀಡುವ ಅಧಿಕಾರವುಳ್ಳ ತಹಸೀಲ್ದಾರರಿಗೆ ಸ್ಪಷ್ಟ ಜವಾಬ್ದಾರಿಗಳನ್ನು ಕಾಯ್ದೆ ಗೊತ್ತುಪಡಿಸಿದೆ. ಸುಳ್ಳು ಪ್ರಮಾಣಪತ್ರವೆಂದು ಸಾಬೀತಾದರೆ ಕಠಿಣ ಕ್ರಮಕ್ಕೂ ಕಾಯ್ದೆಯಡಿ ಅವಕಾಶ ಕಲ್ಪಿಸಲಾಗಿದೆ.