ತುಷ್ಟೀಕರಣವೇ ಸಿಎಂ ಸಿದ್ದರಾಮಯ್ಯ ನೀತಿ; ಸಚಿವ ಪ್ರಲ್ಹಾದ ಜೋಶಿ ಟೀಕೆ

Shri-Pralhad-Joshi-2
Published on

ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲರನ್ನು ಒಳಗೊಂಡ, ಎಲ್ಲರಿಗೂ ತಲುಪಿಸುವ ಯೋಜನೆ, ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತುಷ್ಟೀಕರಣ ನೀತಿ ಅನುಸರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ ಎಂಬ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದ ಗ್ಯಾರಂಟಿಗಳ ಜಾರಿ ರೀತಿ, ರಾಜ್ಯದ ಪರಿಸ್ಥಿತಿಯು ದೇಶದ ಜನರಿಗೆ ಗೊತ್ತಾಗಿದ್ದು, ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮನೆಗೆ ಕಳುಹಿಸಿ ಜನರು ಪಾಠ ಕಲಿಸಿದ್ದಾರೆ ಎಂದು ಕುಟುಕಿದರು.

ಗಂಭೀರ ಆರೋಪ

‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆಯಡಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಪೂರೈಸುತ್ತಿದೆ. ಈ ಯೋಜನೆಯ ವೆಚ್ಚದ ಹೊರೆ ತಗ್ಗಿಸಲು ಅನಿಯಮಿತ ವಿದ್ಯುತ್ ಕಡಿತ (ಲೋಡ್‌ಶೆಡ್ಡಿಂಗ್) ಮಾಡಿ, ತಾಂತ್ರಿಕ ನೆಪವೊಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಸಾಕಷ್ಟಿದ್ದು, ಗಣಿಗಾರಿಕೆ ಹಾಗೂ ಉತ್ಪಾದನೆಗೆ ಯಾವುದೇ ಸಮಸ್ಯೆಯಾಗಿಲ್ಲ. ರಾಜ್ಯ ಸರ್ಕಾರ ಬಯಸಿದಂತೆ ಹೆಚ್ಚುವರಿ ಕಲ್ಲಿದ್ದಲು ಪೂರೈಸಲಾಗಿದೆ ಎಂದರು.

ಬರಗಾಲದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ, ಬೇಡಿಕೆ ಹೆಚ್ಚಳ ಸ್ವಾಭಾವಿಕ. ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ಉಚಿತ ವಿದ್ಯುತ್ ಪೂರೈಕೆ ವೆಚ್ಚದ ಭಾರ ಕಡಿಮೆ ಮಾಡಿಕೊಳ್ಳಲು ಲೋಡ್‌ಶೆಡ್ಡಿಂಗ್ ಉಪಾಯ ಹೂಡಿದೆ ಎಂದು ದೂರಿದರು.

ನಾನೇ ಅಭ್ಯರ್ಥಿ

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಿಸುವುದಿಲ್ಲ. ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ನಾನೇ ಪಕ್ಷದ ಅಭ್ಯರ್ಥಿ. ಜಗದೀಶ ಶೆಟ್ಟರ್ ಸ್ಪರ್ಧಿಸಿದರೆ ಸಂತೋಷ ಎಂದು ಪ್ರಲ್ಹಾದ ಜೋಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net