

ಶಿವಮೊಗ್ಗ: ತಾಲೂಕಿನ ಗಾಜನೂರು ಗ್ರಾಪಂನ ಎಕೆ, ಎಡಿ ಕಾಲನಿಯ ಪಕ್ಕದಲ್ಲಿರುವ ಹಳೆಯ ದೊಡ್ಡಿ ಖಾಲಿ ಜಾಗವನ್ನು ಅಂಬೇಡ್ಕರ್ ಭವನಕ್ಕೆ ನಿರ್ಮಾಣಕ್ಕೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಗಾಜನೂರಿನಿಂದ ಶಿವಮೊಗ್ಗದವರೆಗೆ ಸ್ಥಳೀಯರು ಸೋಮವಾರ ಕಾಲ್ನಡಿಗೆಯಲ್ಲಿ ಆಗಮಿಸಿ ಜಿಪಂ ಸಿಇಒ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಸಮುದಾಯಗಳಿಗೆ ಶುಭ ಕಾರ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಯಾವುದೇ ಸಭಾಂಗಣವಿಲ್ಲ. ಇಲ್ಲಿನ ದಲಿತರು ಅಂಬೇಡ್ಕರ್ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ ಎಂದು ಗಮನಸೆಳೆದರು.
ಹಲವು ವರ್ಷಗಳಿಂದ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೇರೆ ಸಮುದಾಯಗಳಿಗೆ 60*80 ಮತ್ತು ಹೆಚ್ಚಿನ ಅಳತೆಯ ನಿವೇಶನ ನೀಡಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಮಾತ್ರ ಉಪಯೋಗಕ್ಕೆ ಬಾರದ, ಕಾಲನಿಯಿಂದ ದೂರವಿರುವ 10*90 ಅಳತೆಯ ಜಾಗ ನೀಡಲಾಗಿದೆ. ಈ ಜಾಗದಲ್ಲಿ ಭವನ ನಿರ್ಮಿಸಲು ಸಾಧ್ಯವಾಗದೆ ಪಾಳು ಬಿದ್ದಿದೆ. ಎಕೆ, ಎಡಿ ಕಾಲನಿ ಪಕ್ಕದಲ್ಲಿ ದನಗಳ ದೊಡ್ಡಿಯ ಜಾಗವನ್ನು ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸುವಂತೆ ಗ್ರಾಪಂ, ತಾಪಂ, ಜಿಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ಹಾಲೇಶಪ್ಪ, ಶಿವಾಜಿ, ಮೂರ್ತಿ, ನಾಗರಾಜ್, ಪ್ರಭು, ರಾಜ್‌ಕುಮಾರ್, ಆನಂದ್, ಶೇಷಪ್ಪ, ಪರಮೇಶ್ವರ ಸೂಗೂರು, ರಂಗಪ್ಪ ಮೊದಲಾದವರಿದ್ದರು.