

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಎದುರು ಮಾಜಿ ಸಿಎಂ ಎಸ್.ಬಂಗಾರಪ್ಪನವರ ಪುತ್ಥಳಿ ಸ್ಥಾಪಿಸಲು ಸ್ಥಳಾವಕಾಶ ಒದಗಿಸಬೇಕೆಂದು ಕಂಚಿನ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಪ್ರಮುಖರು ಸೋಮವಾರ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು.
ಧೀಮಂತ ರಾಜಕಾರಣಿಯಾಗಿದ್ದ ಬಂಗಾರಪ್ಪ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಾಯಕ. ಅವರ ಪುತ್ಥಳಿ ಸ್ಥಾಪನೆ ಸಂಬಂಧ ನಮ್ಮ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ನಿರ್ದೇಶನ ನೀಡಿದ್ದಾರೆ. ಪುತ್ಥಳಿ ಸ್ಥಾಪನೆಗೆ 10್ಡ20 ಸ್ಥಳ ನೀಡುವಂತೆ ಸೂಚಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಸಹ ಒಂದು. ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದು ಬಂಗಾರಪ್ಪ. ಹೀಗಾಗಿ ಅವರ ಪ್ರತಿಮೆಯನ್ನು ಆಸ್ಪತ್ರೆ ಎದುರು ಸ್ಥಾಪಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಆರ್.ಮೋಹನ್, ಉಪಾಧ್ಯಕ್ಷ ಶಂಕರ್ ರಾಕೇಶ್, ಪ್ರಮುಖರಾದ ಶಶಿಕುಮಾರ್, ಧರ್ಮರಾಜ್, ತಂಗರಾಜ್, ರಾಮಚಂದ್ರ ನಾಯ್ಕ, ಎಸ್.ವೈ. ರಮೇಶ್, ಯಶವಂತ ನಾಯ್ಕ, ಮೈಕಲ್ ಕಿರಣ್, ಚನ್ನವೀರಪ್ಪ ಗಾಮನಗಟ್ಟಿ, ಎಂ.ಜೆ.ಚನ್ನೇಶ್ ಇದ್ದರು.