ಬಿಪಿಎಲ್ ಪಡಿತರ ಫಲಾನುಭವಿಗಳ ಮಿತಿ ಹೆಚ್ಚಳಕ್ಕೆ ಮನವಿ | 4.60 crore beneficiaries demand

kh muniyappa
Published on

ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಿಪಿಎಲ್ ಪಡಿತರ ಫಲಾನುಭವಿಗಳ ಮಿತಿಯನ್ನು ಚಾಲ್ತಿ 4.01 ಕೋಟಿಯಿಂದ 4.60 ಕೋಟಿಗೆ ವಿಸ್ತರಣೆ ಮಾಡಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದ್ದಾರೆ.

ಕಾಯ್ದೆಯಡಿ 2011ರ ಜನಗಣತಿ ಪ್ರಕಾರ ಬಿಪಿಎಲ್ ಪಡಿತರ ಫಲಾನುಭವಿಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಆದರೆ ಜನಸಂಖ್ಯೆ ವೃದ್ಧಿ, ಮದುವೆ, ಅವಿಭಕ್ತ ಕುಟುಂಬಗಳ ವಿಭಜನೆ ಸೇರಿ ವಿವಿಧ ಕಾರಣಗಳಿಂದ ಕುಟುಂಬಗಳ ಸಂಖ್ಯೆಯೂ ಹೆಚ್ಚಳವಾಗಿದೆ.

ಹೆಚ್ಚುತ್ತಿರುವ ಬೇಡಿಕೆ ಸರಿದೂಗಿಸಲು ರಾಜ್ಯ ಸರ್ಕಾರ 17.50 ಲಕ್ಷ ಬಿಪಿಎಲ್ ಪಡಿತರ ಚೀಟಿವುಳ್ಳ 45 ಲಕ್ಷ ಹೆಚ್ಚುವರಿ ಫಲಾನುಭವಿಗಳಿಗೆ ಮಾಸಿಕ ತಲಾ 10 ಕೆಜಿ ಅಕ್ಕಿ ವಿತರಿಸುತ್ತಿದೆ. ಅಲ್ಲದೆ, ಹೊಸ ಪಡಿತರ ಚೀಟಿ ಕೋರಿ 2023ರಲ್ಲಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಈವರೆಗೆ 1.65 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. 1.90 ಲಕ್ಷ ಅರ್ಜಿಗಳ ವಿಲೇವಾರಿ ಬಳಿಕವೂ 2.60 ಲಕ್ಷ ಅರ್ಜಿಗಳು ಉಳಿದಿವೆ. ರಾಷ್ಟ್ರೀಯ ಆಹಾಭದ್ರತಾ ಕಾಯ್ದೆಯಡಿ ಫಲಾನುಭವಿಗಳ ಸಂಖ್ಯಾ ಮಿತಿ ಸಡಿಲಗೊಳಿಸಿ 4.60 ಕೋಟಿಗೆ ವಿಸ್ತರಿಸಿ ರಾಜ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.

ಆಧುನೀಕರಣಕ್ಕೆ ನೆರವು

ಪಡಿತರ ವಿತರಣಾ ವ್ಯವಸ್ಥೆಯ ಆಧುನೀಕರಣ ಮತ್ತು ಸುಧಾರಣೆಗೆ 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಮತ್ತೊಂದು ಮನವಿ ಸಲ್ಲಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕ್ವಿಂಟಾಲ್‌ಗೆ 21 ರೂ. ಕಮಿಷನ್ ರೂಪದಲ್ಲಿ ನೀಡಿ, ಪಿಒಎಸ್ ಡಿವೈಸ್ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.

ಬಹುತೇಕ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕಮಿಷನ್‌ನಲ್ಲಿ ತಂತ್ರಜ್ಞಾನ ನಿರ್ವಹಣಾ ವೆಚ್ಚ ಭರಿಸುವುದು ಕಷ್ಟದಾಯಕವೆಂದು ಮೊರೆಯಿಟ್ಟಿದ್ದಾರೆ. ತಂತ್ರಜ್ಞಾನ ವ್ಯವಸ್ಥೆ ಅನುಷ್ಠಾನಕ್ಕೆ ತರಲು ಪ್ರತ್ಯೇಕವಾಗಿ 35 ಕೋಟಿ ರೂ. ಅನುದಾನ ನೀಡಿದರೆ ಸಮಸ್ಯೆ ಬಗೆಹರಿದು, ಪಾರದರ್ಶಕತೆ, ದಕ್ಷತೆ ಮತ್ತು ಉತ್ತರದಾಯಿತ್ವದ ಉದ್ದೇಶ ಈಡೇರುತ್ತದೆ ಎಂದು ಮುನಿಯಪ್ಪ ನಿವೇದಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net