ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ

C.C. PATIL.
Published on

ನರಗುಂದ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆ ಹೋರಾಟಕ್ಕೆ ರಾಜ್ಯ ಸರ್ಕಾರ ತಡೆಯೊಡ್ಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ನಿರಂತರ ಹೋರಾಟ ನಡೆಸಲಾಗುತ್ತಿದೆ. ಹೋರಾಟ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಪಂಚಮಸಾಲಿ ಸಮಾಜದವರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಪರಿಣಾಮ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿ. 10ರಂದು ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆಗೆ ಕರೆ ನೀಡಲಾಗಿದೆ ಎಂದರು.

ಈ ಮಹತ್ವದ ಹೋರಾಟದಲ್ಲಿ ಲಿಂಗಾಯತ ಸಮಾಜದ ನಾಲ್ಕು ಸಾವಿರ ಜನ ವಕೀಲರು ಸಮವಸ್ತ್ರ ಧರಿಸಿ ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ. ಅಲ್ಲದೆ, ಪಂಚಮಸಾಲಿ ಸಮಾಜದ 50 ಸಾವಿರ ಜನರು 10 ಸಾವಿರ ಟ್ರ್ಯಾಕ್ಟರ್‌ಗಳಲ್ಲಿ ಸುವರ್ಣಸೌಧ ಮುತ್ತಿಗೆ ಚಲೋಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಹೋರಾಟಕ್ಕೆ ಆಗಮಿಸುವ ಯಾವುದೇ ಟ್ರ್ಯಾಕ್ಟರ್ ಹಾಗೂ ಕ್ರೂಸರ್ ವಾಹನಗಳು ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ರಾಜ್ಯ ಸರ್ಕಾರದ ನಿರ್ದೇಶನದಂತೆ ಐಜಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ಆದೇಶ ಹೊರಡಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿ ನಡೆ ಖಂಡಿಸಿ, ಡಿ. 9ರಂದು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಹೋರಾಟ ಮಾಡಲು ಅವಕಾಶವಿದೆ. ಆದರೆ, ಸಂವಿಧಾನಕ್ಕೆ ತದ್ವಿರುದ್ಧವಾದ ಆದೇಶ ಹೊರಡಿಸುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಪ್ರಜಾಪ್ರಭುತ್ವದ ನೀತಿಗಳನ್ನು ಉಲ್ಲಂಘಿಸಿದ್ದಾರೆ. ಈ ಆದೇಶ ತಕ್ಷಣ ಹಿಂಪಡೆಯುವಂತೆ ಲಿಂಗಾಯತ ಪಂಚಮಸಾಲಿ ಸಮಾಜದ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಚಳಿಗಾಲ ಅಧಿವೇಶನದಲ್ಲಿ ಡಿ. 9ರಂದು ಧರಣಿ ನಡೆಸಲಿದ್ದೇವೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಎಸ್.ಆರ್. ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ರಾಚನಗೌಡ ಪಾಟೀಲ, ಭಾವನಾ ಪಾಟೀಲ, ನೀಲಮ್ಮ ವಡ್ಡಿಗೇರಿ, ರೇಣುಕಾ ಕಲ್ಲಾರಿ, ಪ್ರಶಾಂತ ಜೋಶಿ, ಚಂದ್ರಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net