

ಶಿವಮೊಗ್ಗ: ತುರ್ತು ಪರಿಸ್ಥಿತಿ ಘೋಷಣೆಯ 50ನೇ ವರ್ಷದ ಸಂದರ್ಭದಲ್ಲಿ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್‌ನಿಂದ ಇದೇ ತಿಂಗಳು ಆಯೋಜಿಸಿರುವ ಗೀತಗಾಯನ ಸ್ಪರ್ಧೆಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಕಳುಹಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಪದಾಧಿಕಾರಿಗಳು ಗುರುವಾರ ಶಿಕ್ಷಣಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಯುವಜನರಲ್ಲಿ ರಾಜಕೀಯ ದ್ವೇಷ ಹಾಗೂ ಕೋಮು ಭಾವನೆ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಿದಂತಿದೆ. ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಇ.ಕಾಂತೇಶ್ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ದೇಶಭಕ್ತಿಯ ನಾಟಕ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ಅವರು ದೇಶದ ಅಂದಿನ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ಆಧರಿಸಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ ಈಗ ಈಶ್ವರಪ್ಪ ಅವರು ರಾಜಕೀಯ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಗೀತ ಗಾಯನ ಸ್ಪರ್ಧೆ ಆಯೋಜಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಇಂತಹ ಕಾರ್ಯಕ್ರಮವನ್ನು ಈಶ್ವರಪ್ಪ ಮತ್ತು ಅವರ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದರೂ ಅದನ್ನು ರದ್ದುಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು.
ಎನ್‌ಎಸ್‌ಯುಐ ನಗರಾಧ್ಯಕ್ಷ ಎಚ್.ಎಲ್.ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ನಗರ ಪ್ರಧಾನ ಕಾರ್ಯದರ್ಶಿ ಆದಿತ್ಯ, ಪ್ರಮುಖರಾದ ವರುಣ್ ವಿ. ಪಂಡಿತ್, ಜೀವನ್, ಸುಭಾನ್, ಸಾಗರ್, ನಂದೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಇತರರಿದ್ದರು.