ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡದಂತೆ ಮನವಿ

kse manavi
ಡಿಸಿ ಕಚೇರಿ ಎದುರಿನ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಗರಸಭೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು. ಇ.ವಿಶ್ವಾಸ್, ಕೆ.ಇ.ಕಾಂತೇಶ್, ಸೀತಾಲಕ್ಷ್ಮೀ, ಲಕ್ಷ್ಮೀ ಶಂಕರನಾಯ್ಕ ಮುಂತಾದವರಿದ್ದರು.
Published on

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮುಸ್ಲಿಮರಿಗೆ ಅವಕಾಶ ನೀಡಬಾರದು. ಇದರ ಮಾಲೀಕತ್ವದ ಬಗ್ಗೆ ವ್ಯಾಪಕ ಗೊಂದಲವಿದ್ದು ಅದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಹೀಗಾಗಿ ಇದನ್ನು ಪ್ರತಿಭಟನೆ ಮತ್ತಿತರ ಉದ್ದೇಶಕ್ಕೆ ನೀಡಬಾರದು ಎಂದು ಆಗ್ರಹಿಸಿ ಮಂಗಳವಾರ ರಾಷ್ಟ್ರಭಕ್ತ ಬಳಗದಿಂದ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು.

ಈ ಮೈದಾನ ಪಾಲಿಕೆಯ ಒಡೆತನಕ್ಕೆ ಒಳಪಟ್ಟ ಆಸ್ತಿಯಾಗಿದ್ದು, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ನೀಡಬೇಕು. ಈ ಮೈದಾನವನ್ನು ಕಾನೂನುಬಾಹಿರವಾಗಿ ಬೇರೆಯವರಿಗೆ ಖಾತೆ ಮಾಡಲಾಗಿದೆ. ಕೂಡಲೇ ಅದನ್ನು ಪಾಲಿಕೆ ತನ್ನ ಸುಪರ್ದಿಗೆ ಪಡೆಯಬೇಕೆಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಕೆಲವು ದುಷ್ಕರ್ಮಿಗಳು ರಾತ್ರೋರಾತ್ರಿ ಈ ಮೈದಾನಕ್ಕೆ ಬೇಲಿ ಹಾಕಿ ನಗರದಲ್ಲಿ ಗೊಂದಲದ ವಾತಾವರಣಕ್ಕೆ ಕಾರಣರಾಗಿದ್ದರು. ಬೇಲಿಹಾಕಲು ರೈಲ್ವೆ ಹಳಿಯ ಕಂಬಿಗಳನ್ನು ಬಳಸಿದ್ದರು. ಭಾರತ ಸರ್ಕಾರದ ಆಸ್ತಿಯನ್ನು ಕದ್ದು ತಂದಿರುವುದು ಗಂಭೀರ ಪ್ರಕರಣವಾಗಿದ್ದು, ಕೂಡಲೇ ಸ್ವಯಂಪ್ರೇರಿತರಾಗಿ ಜಿಲ್ಲಾ ರಕ್ಷಣಾಧಿಕಾರಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಮುಂದಿನ ಹೋರಾಟಕ್ಕೆ ರಾಷ್ಟ್ರಭಕ್ತರ ಬಳಗ ಸಿದ್ಧವಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಬಾಲು, ಮೋಹನ್ ಜಾಧವ್, ಕುಪೇಂದ್ರ, ಸೀತಾಲಕ್ಷ್ಮೀ, ಶಿವಾಜಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net