

ಶಿವಮೊಗ್ಗ: ದೇಶದ ಪ್ರಮುಖ ನಗರಗಳಿಗೆ ಶಿವಮೊಗ್ಗದಿಂದ ನೇರ ವಿಮಾನ ಸಂಪರ್ಕ ಒದಗಿಸುವ ಅಗತ್ಯವಿದೆ. ಸ್ಪೈಸ್ ಜೆಟ್ ಸಂಸ್ಥೆಯು ಫಿಕ್ಕಿ ವಾಣಿಜ್ಯ ಸಂಸ್ಥೆಗೆ ಒದಗಿಸುತ್ತಿರುವ ಟಿಕೆಟ್ ರಿಯಾಯಿತಿ ಮಾದರಿಯಂತೆಯೇ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಸದಸ್ಯರಿಗೂ ಕಾರ್ಪೊರೇಟ್ ರಿಯಾಯಿತಿ ನೀಡಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಎಲ್ಲ ವಲಯಗಳಲ್ಲೂ ವೇಗವಾಗಿ ಬೆಳೆಯುತ್ತಿರುವ ನಗರ. ಹೀಗಾಗಿ ದೇಶದ ಪ್ರಮುಖ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಕಲ್ಪಿಸುವ ಅವಶ್ಯವಿದೆ ಎಂದರು.
ಸ್ಪೈಸ್ ಜೆಟ್ ಎಜಿಎಂ (ಸೇಲ್ಸ್ ) ಲಲಿತ್ ಆದಿತ್ಯ ಚಲ್ಲ ಮಾತನಾಡಿ, ಶಿವಮೊಗ್ಗ ವಿಮಾನಯಾನದ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ನೀಡಿದರು. ಪುಣೆ, ಅಹಮದಾಬಾದ್‌ಗೆ ವಿಮಾನ ಸಂಪರ್ಕ ಕಲ್ಪಿಸುವಂತೆ ಉದ್ಯಮಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಸ್ಪೈಸ್ ಜೆಟ್ ಸೇಲ್ಸ್ ಮ್ಯಾನೇಜರ್ ಜೀತು ಥಾಮಸ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಗಣೇಶ ಎಂ.ಅಂಗಡಿ, ಎಸ್.ಪಿ.ಶಂಕರ್, ವಿ.ಕೆ.ಜೈನ್, ಲಕ್ಷ್ಮೀದೇವಿ ಗೋಪಿನಾಥ್, ಪ್ರದೀಪ್ ಯಲಿ, ರವಿ ಪ್ರಕಾಶ್ ಜನ್ನಿ ಮುಂತಾದವರಿದ್ದರು.