ಕೋಣನಕೆರೆ ಗ್ರಾಮದಲ್ಲಿ ಬಸ್ ನಿಲುಗಡೆಗೆ ಮನವಿ

08 HANUR 3
ಕೋಣನಕೆರೆ ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಗಿರಿಜನ ಮಹಿಳೆಯರು ಕೊಳ್ಳೇಗಾಲ ಸಾರಿಗೆ ಘಟಕಕ್ಕೆ ತೆರಳಿ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು. ಭದ್ರಮ್ಮ, ಸಿದ್ದಮ್ಮ, ಮಹದೇವಮ್ಮ, ಗೌರಮ್ಮ ಇತರರು ಇದ್ದರು.
Published on

ಹನೂರು: ಗ್ರಾಮದಲ್ಲಿ ಸಾರಿಗೆ ಬಸ್ ನಿಲ್ಲಿಸುವಂತೆ ತಾಲೂಕಿನ ಕೋಣನಕೆರೆ ಗಿರಿಜನ ಮಹಿಳೆಯರ ದಂಡೇ ಮಂಗಳವಾರ ಕೊಳ್ಳೇಗಾಲ ಸಾರಿಗೆ ಘಟಕಕ್ಕೆ ತೆರಳಿ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು.

ಈ ವೇಳೆ ಮಹಿಳೆಯರು ಮಾತನಾಡಿ, ಗ್ರಾಮವು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಗ್ರಾಮದಲ್ಲಿ ಸುಮಾರು 500 ಗಿರಿಜನರ ಕುಟುಂಬಗಳಿದ್ದು, ಕೆಲಸ ಕಾರ್ಯಗಳ ನಿಮಿತ್ತ ಕೌದಳ್ಳಿ, ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಗೆ ತೆರಳಬೇಕಿದೆ. ಆದರೆ ಚಾಲಕರು ಗ್ರಾಮದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ಕಾದು ನಿಂತು ಖಾಸಗಿ ಬಸ್‌ಗಳ ಮೊರೆ ಹೋಗಬೇಕಿದ್ದು, ತುಂಬ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಆದರೆ ಗ್ರಾಮದಲ್ಲಿ ಸಾರಿಗೆ ಬಸ್ ನಿಲ್ಲಿಸದಿರುವುದರಿಂದ ಈ ಯೋಜನೆಯಿಂದ ವಂಚಿತರಾಗಿದ್ದೇವೆ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಗ್ರಾಮದಲ್ಲಿ ಬಸ್ ನಿಲ್ಲಿಸಲು ಕ್ರಮವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಘಟಕ ವ್ಯವಸ್ಥಾಪಕ ಭೋಗನಾಯಕ ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ ಚಾಲಕರಿಗೆ ಸೂಚಿಸಲಾಗುವುದು. ಒಂದು ವೇಳೆ ಬಸ್ ನಿಲ್ಲಿಸುವುದು ತಪ್ಪಿದ್ದಲ್ಲಿ ಸಂಬಂಧಪಟ್ಟ ಚಾಲಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗಿರಿಜನ ಮಹಿಳಾ ಸಂಘದ ಅಧ್ಯಕ್ಷೆ ಭದ್ರಮ್ಮ, ಮಹಿಳೆಯರಾದ ಸಿದ್ದಮ್ಮ, ಗೌರಮ್ಮ, ಮಹದೇವಮ್ಮ, ಮೇರಿ, ಜಡೇಮಾದಮ್ಮ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net