ಬೆಂಗಳೂರು: ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಸರ್ವೇ ಸಂಖ್ಯೆ 15ರಲ್ಲಿರುವ 44 ಎಕರೆ 33 ಗುಂಟೆಗೆ ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದ ಮೊರೆ ಹೋಗುವುದಾಗಿ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್. ಎನ್.ಅಶೋಕ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಮ್ಮ ಎಂಬುವರು ಬರೆದಿರುವ ಇಚ್ಛಾಪತ್ರದ(ವಿಲ್) ಅನುಸಾರ ಈ ಜಮೀನು, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡಲಾಗಿದೆ. 1978ರಲ್ಲಿ ಬರೆಯದಿರುವ ಪತ್ರದಲ್ಲಿ ಟ್ರಸ್ಟ್, ಈ ಜಮೀನನ್ನು ಶಿಕ್ಷಣದ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವ ಹಕ್ಕು ಹೊಂದಿದೆ. ದಶಕಗಳಿಂದ ಈ ಉದ್ದೇಶವನ್ನು ನಾವು ಪಾಲಿಸಿಕೊಂಡು ಬರುತ್ತಿದ್ದೇವೆ. ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಕೆಲವೊಂದು ಕಾನೂನು ಅಂಶಗಳು ಟ್ರಸ್ಟ್ ನಿಲುವಿಗೆ ವಿರುದ್ಧವಾಗಿದೆ. ಕೋರ್ಟ್‌ನ ಆದೇಶವನ್ನು ಸ್ವೀಕರಿಸಿದ್ದರೂ ಕಾನೂನು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಈ ಆದೇಶದ ವಿರುದ್ಧ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.
ಆದಿಚುಂಚನಗಿರಿ ಮಠ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಅರ್.ಅಶೋಕ್, ಸಚಿವ ಕೃಷ್ಣಬೈರೇಗೌಡ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸೇರಿ ನಮ್ಮ ಜನಾಂಗದ ಇತರ ನಾಯಕರನ್ನು ಮತ್ತೊಮ್ಮೆ ಭೇಟಿ ಮಾಡಿ ಇದರ ಬಗ್ಗೆ ಸಲಹೆ ಪಡೆಯುತ್ತೇವೆ. ಅವರು ಕೊಡುವ ಎಲ್ಲ ಸಲಹೆಗಳನ್ನು ಪಡೆದು ಸಜ್ಜೇಪಾಳ್ಯದ ಜಮೀನು ರಕ್ಷಿಸಲಾಗುವುದು. ಟ್ರಸ್ಟ್ ನಡೆಸುವ ಎಲ್ಲ ಹೋರಾಟಕ್ಕೆ ನಮ್ಮ ಜನಾಂಗದವರು ಬೆಂಬಲ ನೀಡಬೇಕೆಂದು ಎಚ್. ಎನ್.ಅಶೋಕ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಟ್ರಸ್ಟಿ ಎಲ್.ಶ್ರೀನಿವಾಸ್, ಕೆಂಚಪ್ಪಗೌಡ, ವೆಂಕಟರಾಮೇಗೌಡ ಮತ್ತು ರಘುಗೌಡ ಸೇರಿ ಇತರರಿದ್ದರು.