ಎಪಿಎಂಸಿ ಭವಿಷ್ಯ ಇಂದು ನಿರ್ಧಾರ: ಸುಗ್ರೀವಾಜ್ಞೆಗೆ ಕೇಂದ್ರದ ತೀವ್ರ ಒತ್ತಡ

apmc
Published on

ಬೆಂಗಳೂರು: ಕೃಷಿ ಮಾರುಕಟ್ಟೆ ಕ್ಷೇತ್ರಕ್ಕೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ಖಾಸಗೀಕರಣದ ಸುಗ್ರೀವಾಜ್ಞೆಗೆ ಅನುಮತಿ ನೀಡುವ ಮೂಲಕ ಕೆಂಪುಹಾಸಿನ ಸ್ವಾಗತಕೋರುವುದು ನಿಶ್ಚಿತವಾಗಿದೆ.

ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣ ಬಿಟ್ಟು ಎಲ್ಲಿ ಬೇಕಾದರೂ ಖರೀದಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿ ಕೊಡುವುದು ಕೇಂದ್ರ ಸರ್ಕಾರದ ಉದ್ದೇಶ. ಎಪಿಎಂಸಿಗಳಿಗೆ ಕೇವಲ ಪ್ರಾಂಗಣದ ಮೇಲೆ ನಿಯಂತ್ರಣ ಹೊರತುಪಡಿಸಿ ಉಳಿದ ಎಲ್ಲ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ. ಇದರಿಂದ ಎಪಿಎಂಸಿಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದು, ರೈತರು ಹಾಗೂ ಸಾವಿರಾರು ವ್ಯಾಪಾರಿಗಳು ಬೀದಿಗೆ ಬೀಳುವ ಅಪಾಯ ಎದುರಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಏನಿದು ವಿವಾದ?: ಕೇಂದ್ರ ಸರ್ಕಾರ 2017ರಲ್ಲಿ ಎಪಿಎಂಸಿ ಮಾದರಿ ಕಾನೂನು ತಂದಿತು. ಇದೀಗ ಏಕಾಏಕಿ ಖಾಸಗಿ ವ್ಯಕ್ತಿಗಳು ಮಾರುಕಟ್ಟೆ ಪ್ರಾಂಗಣ ಹೊರತು ಬೇರೆ ಕಡೆ ಖರೀದಿಗೆ ಅವಕಾಶ ಮಾಡಿಕೊಡುವ ಸುಗ್ರೀವಾಜ್ಞೆ ಹೊರಡಿಸಲು ಮುಂದಾ ಗಿರುವುದು ವಿವಾದದ ಕೇಂದ್ರಬಿಂದು. ಇದರನ್ವಯ ರೈತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲ.

ಎಷ್ಟು ಮಾರುಕಟ್ಟೆಗಳಿವೆ?

ರಾಜ್ಯದಲ್ಲಿ ಒಟ್ಟಾರೆ 162 ಮಾರುಕಟ್ಟೆಗಳಿವೆ. ಸಾವಿರಾರು ಎಕರೆ ಜಾಗವಿದ್ದು ಲಕ್ಷಾಂತರ ಕೋಟಿ ರೂ.ಬೆಲೆ ಬಾಳುತ್ತದೆ. 1966ರ ಎಪಿಎಂಸಿ ಕಾಯ್ದೆಗೆ 1986ರಲ್ಲಿ ತಿದ್ದುಪಡಿ ತಂದು ಚುನಾವಣೆಯ ಮೂಲಕ ರೈತ ಪ್ರತಿನಿಧಿಗಳು ಇರುವಂತೆ ಮಾಡಿದ್ದರಿಂದ ಒಂದು ನಿಗದಿತ ಬೆಲೆ ಸಿಗುವಂತಾಗಿದೆ. ವಿಶ್ವಬ್ಯಾಂಕ್ ಸಾಲ ಸಹ ನೀಡಿದ್ದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಆದರೆ ಈಗ ಆ ವ್ಯವಸ್ಥೆಯೇ ನಾಶವಾಗುವ ಆತಂಕ ಎದುರಾಗಿದೆ.

ಖಾಸಗಿ ಕಂಪನಿಗಳ ಒತ್ತಡ?

ಎಪಿಎಂಸಿಗಳನ್ನು ದುರ್ಬಲಗೊಳಿಸುವುದರ ಹಿಂದೆ ಕೆಲವು ದೊಡ್ಡ ಕಂಪನಿಗಳ ಒತ್ತಡ ಕೆಲಸ ಮಾಡಿದೆಯೆಂದು ಹೇಳಲಾಗುತ್ತಿದೆ. ಮುಂದೆ ಕಂಪನಿ ಕೃಷಿಗೂ ದಾರಿ ಮಾಡಿಕೊಡುವ ಹುನ್ನಾರವೂ ಇದೆ ಎಂದೇ ಹೇಳಲಾಗುತ್ತಿದೆ. ರಾಜ್ಯದಲ್ಲಿ ರೈತರು ಬೆಳೆಯುವ ಬೆಳೆಯಲ್ಲಿ ಶೇ. 40 ಮಾರುಕಟ್ಟೆಗೆ ಬಂದರೆ, ಸುಮಾರು ಶೇ. 25 ರೈತರು ಸ್ವಂತ ಬಳಕೆಗೆ ಉಪಯೋಗಿಸುತ್ತಾರೆ. ಉಳಿದ ಶೇ. 35 ಮಾರುಕಟ್ಟೆಯತ್ತ ಬರುವಂತೆ ಮಾಡಬೇಕಾಗಿತ್ತೇ ಹೊರತು ಖಾಸಗಿ ಖರೀದಿಗೆ ಅವಕಾಶ ನೀಡುವ ಮೂಲಕ ಮಾರುಕಟ್ಟೆಗಳ ಸ್ವರೂಪವೇ ಇಲ್ಲದಂತೆ ಮಾಡಲಾಗುತ್ತಿದೆ. ಪ್ರತಿ ವರ್ಷ ಸುಮಾರು 40 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಕೃಷಿ ಉತ್ಪನ್ನಗಳ ವಹಿವಾಟು ಮಾರುಕಟ್ಟೆಗಳ ಮೂಲಕ ನಡೆಯುತ್ತದೆ ಎಂಬುದು ಒಂದು ಅಂದಾಜು.

ಬೇರೆ ಎಲ್ಲಿ ಸುಗ್ರೀವಾಜ್ಞೆ?

ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್​ಗಳಲ್ಲಿ ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ. ಮೇ 5ರಂದು ರಾಜ್ಯದ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕೇಂದ್ರ ನೀಡಿರುವ ಸೂಚನೆಯಂತೆ ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಮುಂದಾಗಿದೆ.

ಹಿಂಪಡೆದ ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ 2018ರ ಅಕ್ಟೋಬರ್​ನಲ್ಲೇ ವಿಧೇಯಕ ರೂಪಿಸಿತ್ತು.ಇದಕ್ಕೆ ವಿಧಾನಸಭೆ ಒಪ್ಪಿಗೆಯೂ ಸಿಕ್ಕಿತ್ತು, ಆದರೆ ಪರಿಷತ್​ನಲ್ಲಿ ಸರ್ಕಾರವೇ ದುಷ್ಪರಿಣಾಮಗಳನ್ನು ಅರಿತ ಬಳಿಕ ಹಿಂದಕ್ಕೆ ಪಡೆಯಿತು.

ರಾಜ್ಯಪಾಲರಿಂದ ವಾಪಸ್

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲೂ ರ್ಚಚಿಸದೆ ಸುಗ್ರೀವಾಜ್ಞೆ ಸಿದ್ಧ ಮಾಡಿ ರಾಜ್ಯಪಾಲರಿಗೆ ಒಪ್ಪಿಗೆಗಾಗಿ ಕಳುಹಿಸಿತ್ತು. ಆದರೆ ಸಂಪುಟದಲ್ಲಿ ಒಪ್ಪಿಗೆ ಕಡ್ಡಾಯವೆಂದು ಷರಾ ಬರೆದು ಅವರು ವಾಪಸ್ ಕಳುಹಿಸಿದ್ದಾರೆ. ಆದ್ದರಿಂದ ಗುರುವಾರ ಸಂಪುಟದ ಮುಂದೆ ತರಲಾಗುತ್ತಿದೆ.

ಮಾದರಿ ಮಾರುಕಟ್ಟೆ

ರಾಜ್ಯದಲ್ಲಿ ಆನ್​ಲೈನ್ ಮಾರುಕಟ್ಟೆ ವ್ಯವಸ್ಥೆ ತಂದ ನಂತರ ಅನೇಕ ರಾಜ್ಯಗಳು ಅದನ್ನು ಅಳವಡಿಸಿಕೊಂಡವು. ಕೇಂದ್ರ ಸಹ ರಾಜ್ಯದ ಮಾರುಕಟ್ಟೆ ವ್ಯವಸ್ಥೆಯನ್ನು ಪ್ರಶಂಸಿಸಿತ್ತು.

ಎಪಿಎಂಸಿಗಳಲ್ಲಿ ಎಲ್ಲವೂ ಉತ್ತಮವಾಗಿದೆ ಎಂದಲ್ಲ, ಅಲ್ಲಿ ಸಾಕಷ್ಟು ರಾಜಕೀಯ ಇದೆ. ಆದರೆ ಸುಧಾರಣೆ ಮಾಡಬೇಕೆ ಹೊರತು ಇಡೀ ವ್ಯವಸ್ಥೆ ಹಾಳುಮಾಡುವುದು ಸರಿಯಲ್ಲ. ಹೊಸ ವ್ಯವಸ್ಥೆ ಮಧ್ಯವರ್ತಿಗಳ ಹಾವಳಿಯನ್ನು ಹೆಚ್ಚಿಸುತ್ತದೆ. ನಿಯಂತ್ರಣ ತಪ್ಪಿ ಹೋಗುತ್ತದೆ. ಜಿಎಸ್​ಟಿ ಸಹ ಬರುವುದಿಲ್ಲ. ಎಪಿಎಂಸಿ ಆಸ್ತಿಯ ಮೇಲೂ ಪ್ರಭಾವಿಗಳು ಕಣ್ಣುಹಾಕಿರುವ ಸಾಧ್ಯತೆ ಇದೆ.

ಡಾ. ಪ್ರಕಾಶ್ ಕಮ್ಮರಡಿ, ಮಾಜಿ ಅಧ್ಯಕ್ಷ, ಕೃಷಿ ಬೆಲೆ ಆಯೋಗ

ಕೃಷಿಯನ್ನು ಖಾಸಗಿಯವರ ಹಿಡಿತಕ್ಕೆ ನೀಡಬಾರದು. ಕೃಷಿ ರಾಜ್ಯ ವಲಯಕ್ಕೆ ಬರುವ ವಿಚಾರ, ಕೇಂದ್ರ ಒತ್ತಡ ತರಬಾರದು. ಅಧಿವೇಶನದಲ್ಲಿ ಚರ್ಚೆ ನಡೆಸಿ ಕಾನೂನು ತರಬೇಕೇ ಹೊರತು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ಕ್ರಮ ಸರಿಯಲ್ಲ. ಈ ಬಗ್ಗೆ ಹೋರಾಟ ಮಾಡುತ್ತೇವೆ.

ಮಾರುತಿ ಮಾನ್ಪಡೆ, ಕೃಷಿ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net