

ರಾಣೆಬೆನ್ನೂರ: ಎಪಿಎಂಸಿ ಮೇಗಾ ಮಾರುಕಟ್ಟೆಯ ನಿವೇಶನ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯಬೇಕು. ತಮ್ಮ ಬೇಡಿಕೆ ಪ್ರಕಾರ ನಿವೇಶನ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಎಪಿಎಂಸಿ ವರ್ತಕರ ಸಂಘದ ವತಿಯಿಂದ ನಗರದ ಎಪಿಎಂಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಮಾತನಾಡಿ, ಮೆಗಾ ಮಾರುಕಟ್ಟೆ ನಿವೇಶನಗಳ ಹಂಚಿಕೆ ಕುರಿತು ಸ್ಥಳೀಯ ವರ್ತಕರ ಸಂಘದ ವತಿಯಿಂದ ಕೆಲವೊಂದು ಬೇಡಿಕೆಗಳ ಈಡೇರಿಸುವಂತೆ ಹಾಗೂ ಕೆಲವು ಪತ್ರಿಕೆಗಳಲ್ಲಿ ಕೊಟ್ಟಿರುವ ಪ್ರಕಟಣೆಯನ್ನು ರದ್ದು ಪಡಿಸುವಂತೆ ಜ. 17ರಂದು ಮನವಿ ಸಲ್ಲಿಸಿದ್ದೇವೆ.
ಆದರೆ, ಈವರೆಗೂ ಅದಕ್ಕೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳು ವರ್ತಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಫೆ. 2ರಿಂದ ಎಲ್ಲ ವರ್ತಕರು ಸಂಪೂರ್ಣ ವ್ಯಾಪಾರ ವಹೀವಾಟು ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಎಪಿಎಂಸಿ ಕಾರ್ಯದರ್ಶಿ ಎಂ.ವಿ. ಶೈಲಜಾ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಮಾಲತೇಶ ಕಜ್ಜರಿ, ಗೌರವ ಕಾರ್ಯದರ್ಶಿ ಗುರುಪ್ರಕಾಶ ಜಂಬಗಿ ಹಾಗೂ ವರ್ತಕರಾದ ಮಲ್ಲಿಕಾರ್ಜುನ ಅರಳಿ, ಕುಮಾರ ಜಂಬಗಿ, ಯುವರಾಜ ಬಾರಾಟಕ್ಕೆ, ನಾಗರಾಜ ಮೋಟಗಿ, ಶಿವಣ್ಣ ಸುಣಗಾರ, ಬಸನಗೌಡ, ಉಮೇಶ ಹೊನ್ನಾಳಿ ಮತ್ತಿತರರು ಪಾಲ್ಗೊಂಡಿದ್ದರು.