ಎಪಿಎಂಸಿ ಸೆಸ್​ ಸಂಗ್ರಹ ಸಾಧನೆ

8-klr-16 APMC
Published on

ಕೋಲಾರ: ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) 2024-25ನೇ ಸಾಲಿನಲ್ಲಿ ಒಟ್ಟು 6.25 ಕೋಟಿ ರೂ. ಸೆಸ್​ ಸಂಗ್ರಹವಾಗಿದ್ದು, ಆದಾಯ ವೃದ್ಧಿಸಿಕೊಂಡಿದೆ.

ಕೋಲಾರ ಎಪಿಎಂಸಿ ಏಷ್ಯಾದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಪ್ರಮುಖವಾಗಿ ಟೊಮ್ಯಾಟೊ ಸೇರಿ ವಿವಿಧ ತರಕಾರಿ, ಹಣ್ಣುಗಳ ಮಾರಾಟ ನಡೆಯುತ್ತಿದೆ. ದರ ಏರಿಕೆ, ಕುಸಿತದ ಅನಿಶ್ಚಿತತೆ ನಡುವೆಯೂ ಸೆಸ್​ ಸಂಗ್ರಹಣೆಯಲ್ಲಿ ಸಾಧನೆ ಮಾಡಿರುವುದು ದಾಖಲೆಗಳ ಪುಟ ಸೇರಿದಂತಾಗಿದೆ.

2023&24ನೇ ಸಾಲಿನಲ್ಲಿ ಟೊಮ್ಯಾಟೊ ದರ ಗಗನಮುಖಿಯಾಗಿತ್ತು. ಆಗ 4.75 ಕೋಟಿ ಬಳಕೆದಾರರ ಶುಲ್ಕ ಬಂದಿತ್ತು. 2023ರ ಜುಲೈ ಒಂದೇ ತಿಂಗಳಲ್ಲಿ ದಾಖಲೆ ಪ್ರಮಾಣದ 1.24 ಕೋಟಿ ಸೆಸ್​ ಸಂಗ್ರಹವಾಗಿತ್ತು.

ಕಳೆದ ಒಂದು ವರ್ಷದಿಂದ ಟೊಮ್ಯಾಟೊ ದರ ಕಡಿಮೆಯಾಗಿದ್ದು, ಒಂದು ವೇಳೆ 2022, 2023ರಂತೆ ಟೊಮ್ಯಾಟೊ, ತರಕಾರಿಗಳಿಗೆ ಬೆಲೆ ಹೆಚ್ಚಿದ್ದಿದ್ದರೆ 8 ಕೋಟಿ ವರೆಗೆ ಸೆಸ್​ ಸಂಗ್ರಹವಾಗುತ್ತಿತ್ತ್ತು ಎನ್ನಲಾಗಿದೆ.

ಇನ್ನುಳಿದಂತೆ 8 ಮಳಿಗೆಗಳ ಬಾಡಿಗೆಯಿಂದ 1 ಲಕ್ಷ ರೂ. ಆದಾಯ ಬರುತ್ತದೆ. ಪ್ರತಿ 100 ವಹಿವಾಟಿಗೆ 60 ಪೈಸೆ ಸೆಸ್​ ಸಂಗ್ರಹ ಮಾಡಲಾಗುತ್ತಿದ್ದು, ಇದು ಪಾರದರ್ಶಕವಾಗಿ ನಡೆಯುತ್ತಿರುವುದರಿಂದ ಆದಾಯ ಹೆಚ್ಚುತ್ತಿದೆ ಎಂದು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ರಾಜ್ಯಗಳಿಗೆ ನಿತ್ಯ ಟೊಮ್ಯಾಟೊ ಹಾಗೂ ವಿವಿಧ ತರಕಾರಿಗಳು ಸರಬರಾಜು ಆಗುತ್ತಿವೆ. ಹೊರ ರಾಜ್ಯಗಳ ವ್ಯಾಪಾರಸ್ಥರು ಹರಾಜಿನಲ್ಲಿ ಪಾಲ್ಗೊಂಡು ಇಲ್ಲಿ ಖರೀದಿ ಮಾಡಿ ಹೊರಗಡೆಗೆ ಕಳುಹಿಸುತ್ತಿರುತ್ತಾರೆ. 2023ರ ಸುಗ್ಗಿಯ ಕಾಲದಲ್ಲಿ 3.12 ಲಕ್ಷ ಕ್ವಿಂಟಾಲ್​ ಟೊಮ್ಯಾಟೊ ಆವಕವಾಗಿತ್ತು. 15 ಕೆಜಿ ತೂಕದ 20.83 ಲಕ್ಷ ಟೊಮ್ಯಾಟೊ ಬಾಕ್ಸ್​ಗಳು ಹರಾಜಿನಲ್ಲಿ ಮಾರಾಟವಾಗಿದ್ದವು. ಪ್ರತಿ ಬಾಕ್ಸ್​ ಸರಾಸರಿ 930ಕ್ಕೆ ಮಾರಾಟವಾಗಿತ್ತು. ಕೆಲವೊಂದು ಬಾಕ್ಸ್​ ಗರಿಷ್ಠ 2,700ವರೆಗೂ ಹರಾಜಾಗಿದ್ದವು. ಆಗ 1.24 ಕೋಟಿ ಬಳಕೆದಾರರ ಶುಲ್ಕ ಸಂಗ್ರಹವಾಗಿ ದಾಖಲೆ ನಿಮಾರ್ಣವಾಗಿತ್ತು.

* ಹೊರಗಿನಿಂದ ಆವಕ ಹೆಚ್ಚು

ಟೊಮ್ಯಾಟೊ ವಹಿವಾಟಿನಲ್ಲಿ ಕೋಲಾರ ಎಪಿಎಂಸಿಯು ಮುಂಚೂಣಿಯಲ್ಲಿದೆ. ಇಲ್ಲಿಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಜಿಲ್ಲೆ, ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆಗಳಿಂದೂ ಟೊಮ್ಯಾಟೊ ಆವಕ ಹೆಚ್ಚಾಗಿ ಬರುತ್ತದೆ. ಸುಗ್ಗಿ ಹೊರತು ಪಡಿಸಿ ಬೇರೆ ಸಮಯದಲ್ಲೂ ಹೊರಗಿನ ಆವಕ ಹೆಚ್ಚಿರುತ್ತದೆ. ನಿತ್ಯ 6 ಸಾವಿರಕ್ಕೂ ಹೆಚ್ಚು ಕ್ವಿಂಟಲ್​ ಆವಕ ಆಗುತ್ತಿದೆ.

* ಜಾಗ ಗುರುತಿಸುವ ಪ್ರಯತ್ನ

ದಶಕಗಳಿಗೆ ಕೋಲಾರ ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆ ಎದುರಿಸುತ್ತಿದೆ. ಹಲವು ವರ್ಷಗಳಿಂದ ರೈತರು, ವರ್ತಕರು, ಮಂಡಿ ಮಾಲೀಕರು ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಡ ಹಾಕುತ್ತಿದ್ದು, ಜಾಗ ಗುರುತಿಸುವ ಪ್ರಯತ್ನವು ಅಧಿಕಾರಿಗಳಿಂದ ನಿರಂತರವಾಗಿ ನಡೆಯುತ್ತಿದೆ. ಕೋಲಾರ ತಾಲೂಕು ಕಲ್ಲಂಡೂರು ಗ್ರಾಮದ ಸರ್ವೇ ನಂ. 87 ಹಾಗೂ ಕೊನೇಪುರ ಗ್ರಾಮದ ಸರ್ವೇ ನಂ.34ರಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಜಾಗ ಪರಿಶೀಲಿಸಿದ್ದಾರೆ.

* ಟೊಮ್ಯಾಟೊ ತಗ್ಗಿದ ಬೇಡಿಕೆ

ಹೊರ ರಾಜ್ಯಗಳ ವರ್ತಕರಿಂದ ಬೇಡಿಕೆ ಕಡಿಮೆಯಾದ ಕಾರಣ ಟೊಮ್ಯಾಟೊ ಧಾರಣೆ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್​ ಟೊಮ್ಯಾಟೊ ಗುಣಮಟ್ಟಕ್ಕೆ ತಕ್ಕಂತೆ ಮಾರಾಟ ಆಗುತ್ತಿದೆ. ರೈತರಿಗೆ ಕೆಜಿಗೆ ಸರಾಸರಿ 30 ರೂ. ದರ ಲಭಿಸುತ್ತಿದೆ. ಕಳಪೆ ಗುಣಮಟ್ಟದ, ಸಣ್ಣ ಗಾತ್ರದ ಟೊಮ್ಯಾಟೊ ಬಾಕ್ಸ್​ ಕೇವಲ 20 ರಿಂದ 50ಕ್ಕೆ ಮಾರಾಟವಾಗುತ್ತಿದೆ.

ಕೋಟ್​..

ಮಾರುಕಟ್ಟೆಯ ವಹಿವಾಟಿನಲ್ಲಿ ಪಾದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಪ್ರತಿ ತಿಂಗಳು ಸೆಸ್​ ಸಂಗ್ರಹ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಿರೀೆ ಮೀರಿ ಸೆಸ್​ ಸಂಗ್ರಹವಾಗಿದೆ.

> ಕಿರಣ್​ ಕುಮಾರ್​

ಎಪಿಎಂಸಿ ಕಾರ್ಯದರ್ಶಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net