

ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಐತಿಹಾಸಿಕ ಕಾನೂನು ಪುನಃ ಜಾರಿಗೆ ತರಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕಾಯ್ದೆಯ ನ್ಯೂನತೆಗಳನ್ನು ಗುರುತಿಸುವ ಉದ್ದೇಶದಿಂದ ರಚಿಸಲಾಗಿದ್ದ ಪರಿಶೀಲನಾ ಸಮಿತಿ ಹಲವು ಜಿಲ್ಲೆಗಳಲ್ಲಿ ರೈತ ಮುಖಂಡರು, ವರ್ತಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತ್ತು. ಸಮಿತಿ ಶಿಫಾರಸು ಮಾಡಿರುವ 27 ಅಂಶಗಳನ್ನು ಅಳವಡಿಸಿಕೊಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಪಿಎಂಸಿಗಳಲ್ಲಿ ರೈತರು ಹಾಗೂ ವರ್ತಕರ ಶೋಷಣೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಳಸಂತೆಯಲ್ಲಿ ಮಾರಾಟ ತಪ್ಪಿಸುವುದೂ ಪ್ರಮುಖ ಗುರಿಯಾಗಿದೆ ಎಂದರು.
ಅಡಕೆ, ರೈಸ್ ಮಿಲ್ಗೆ ಆತಂಕ ಬೇಡ: ಅಡಕೆ, ರೈಲ್ ಮಿಲ್ಗಳಿಗೆ ಸೆಸ್ನಲ್ಲಿ ವಿನಾಯಿತಿ ಕೊಡಲು ಹಾಗೂ ಇತರ ಉತ್ಪನ್ನಗಳ ಮೇಲೂ ಸೆಸ್ ಕಡಿಮೆ ಮಾಡುವ ಚಿಂತನೆ ಇದೆ. ಕಡಿಮೆ ಮಾಡುವುದರಿಂದ ಅಕ್ರಮ ವಹಿವಾಟಿಗೆ ಬ್ರೇಕ್ ಬೀಳುವ ಜತೆಗೆ ಮಾರುಕಟ್ಟೆಗೂ ಆದಾಯ ಬರುತ್ತದೆ. ಕಾಳಸಂತೆಯಲ್ಲಿ ಮಾರಾಟ ತಡೆಗಟ್ಟಿದಂತಾಗಲಿದೆ ಎಂದರು.
ಗಂಭೀರ ಚಿಂತನೆ: ಶೇ.70 ವಹಿವಾಟು ಎಪಿಎಂಸಿಯಿಂದ ಹೊರಗೆ ನಡೆಯುತ್ತದೆ. ಸೆಸ್ ಕಡಿಮೆ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೆಸ್ ವಂಚನೆ ಬದಲಿಗೆ ಎಪಿಎಂಸಿಗಳಲ್ಲೇ ಮಾರಾಟ ಪ್ರಮಾಣ ಹೆಚ್ಚುವ ವಿಶ್ವಾಸವಿದೆ. ಕಾಯ್ದೆ ತಿದ್ದುಪಡಿಗೆ ರೈಸ್ ಮಿಲ್ ಮಾಲೀಕರು ಮತ್ತು ಅಡಕೆ ಬೆಳೆಗಾರರು ಪರಿಶೀಲನಾ ಸಮಿತಿ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಆತಂಕ ಗಮನಿಸಲಾಗಿದೆ ಎಂದು ಸಚಿವರು ಹೇಳಿದರು.
ಜಾರಿಗೆ ಕಟ್ಟುನಿಟ್ಟಿನ ಕ್ರಮ: ಯಾವುದೇ ಕಾನೂನು ಪಕ್ಷಪಾತದಿಂದ ಕೂಡಿರಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆ ಕಟ್ಟುನಿಟ್ಟಿನ ಜಾರಿ ನಮ್ಮ ಅಧಿಕಾರಿಗಳ ಮೇಲಿದ್ದು, ಸಮರ್ಪಕ ಜಾರಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗುವುದು ಎಂದು ಪಾಟೀಲ ಹೇಳಿದರು.
ದುರ್ಬಲ ಎಪಿಎಂಸಿಗಳ ಬಲವರ್ಧನೆ: ದುರ್ಬಲವಾಗಿರುವ ಎಪಿಎಂಸಿಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗಿದ್ದು, ಮಾರುಕಟ್ಟೆ ಮತ್ತು ಲೈಸೆನ್ಸ್ ಶುಲ್ಕದಲ್ಲಿ ಶೇ.5 ಹಣ ನೀಡಲಾಗುವುದು. ಇದುವರೆಗೆ ಬೆಂಬಲ ಬೆಲೆಯಲ್ಲಿ ಮಾರ್ಕೆಟಿಂಗ್ ಫೆಡರೇಷನ್ ಮಾತ್ರ ಖರೀದಿ ಮಾಡುತ್ತಿದ್ದು, ಈಗ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಕೂಡ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಾಯ್ದೆ ರೂಪಿಸಲಾಗಿದೆ ಎಂದು ವಿವರಿಸಿದರು.
ಎಪಿಎಂಸಿಗಳಲ್ಲಿ ರೈತರಿಗೆ ಊಟ
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಎಪಿಎಂಸಿ ಆವರಣದಲ್ಲಿ ರೈತರು, ಹಮಾಲರಿಗೆ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದು ಶಿವಾನಂದ ಪಾಟೀಲ ತಿಳಿಸಿದರು. ಬಳ್ಳಾರಿ, ಮೈಸೂರಿನಲ್ಲಿ ವರ್ತಕರೇ ಈ ವ್ಯವಸ್ಥೆ ಮಾಡಿದ್ದಾರೆ. ಅದು ನಮಗೆ ಮಾದರಿ. ಉತ್ತಮ ಗುಣಮಟ್ಟದ ವೈವಿಧ್ಯಮಯ ಆಹಾರವನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕ್ಯಾಂಟೀನ್ ತೆರೆಯುವ ಉದ್ದೇಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸರ್ಕಾರದಿಂದಲೇ ಅನುಷ್ಠಾನ ಗೊಳಿಸಬೇಕೆ? ಸ್ಥಳೀಯ ವರ್ತಕರಿಂದ ಕ್ಯಾಂಟೀನ್ ಆರಂಭಿಸಬೇಕೆ ಎಂಬ ಚಿಂತನೆ ನಡೆದಿದೆ. ಬಳ್ಳಾರಿ, ಮೈಸೂರಿನಲ್ಲಿ 1 ರೋಟಿ, ಸ್ವೀಟ್, ರೈಸ್, 2 ಪಲ್ಯ, ಸಾಂಬಾರ್ ಕೊಡುತ್ತಿದ್ದಾರೆ. ಅದೇ ಮಾದರಿಯಲ್ಲಿ 167 ಎಪಿಎಂಸಿಗಳಲ್ಲೂ ರೈತರಿಗೆ ಊಟ ಕೊಡುವ ಆಲೋಚನೆ ಮಾಡಿದ್ದೇವೆ. ವರ್ತ ಕರೂ ಯೋಜನೆಗೆ ಸಹಕರಿಸುವ ವಿಶ್ವಾಸವಿದೆ ಎಂದರು.
ರೈತರ ಹಿತ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆಡಳಿತ ಪಕ್ಷದೊಂದಿಗೆ ಬಿಜೆಪಿ, ಜೆಡಿಎಸ್ ಶಾಸಕರೂ ಬೆಂಬಲ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.