ಎಪಿಸಿಆರ್ ಶಿವಮೊಗ್ಗ ಜಿಲ್ಲಾ ಸಮಿತಿ ಘೋಷಣೆ 20ಕ್ಕೆ

APCR Shivamogga District Committee
Published on

ಶಿವಮೊಗ್ಗ: ಶೋಷಿತ, ದಮನಿತ ಸಮುದಾಯಗಳ ಹಕ್ಕುಗಳಿಗೆ ಹೋರಾಡುತ್ತಿರುವ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)ನ ಶಿವಮೊಗ್ಗ ಜಿಲ್ಲಾ ಸಮಿತಿ ಘೋಷಣಾ ಕಾರ್ಯಕ್ರಮ ಜು.20ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕಿ ಸರೋಜಾ ಪಿ. ಚಂಗೊಳ್ಳಿ ಹೇಳಿದರು.

ಎಪಿಸಿಆರ್ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ನವದೆಹಲಿ ಸೊಸೈಟಿ ಕಾಯ್ದೆಯಡಿ ನೋಂದಣಿಯಾಗಿದೆ. 18 ರಾಜ್ಯಗಳ ಚಾಪ್ಟರ್‌ಗಳಿದ್ದು, ಕರ್ನಾಟಕದ 24 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲೂ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ರಾಜ್ಯಾಧ್ಯಕ್ಷ ಸುಧೀರ್‌ಕುಮಾರ್ ಮುರೊಳ್ಳಿ, ವಕೀಲರಾದ ಕೆ.ಪಿ.ಶ್ರೀಪಾಲ್, ಷೆಹರಾಜ್ ಸಿದ್ಧಿಕಿ ಮುಖ್ಯ ಅತಿಥಿಯಾಗಿರುವರು. ಸಮಿತಿ ಜಿಲ್ಲಾ ಸಂಚಾಲಕ ಆರ್.ಟಿ.ನಟರಾಜ್ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ ಸಂಚಾಲಕರನ್ನು ನೇಮಿಸಲಾಗುವುದು ಎಂದರು.

ಹೋರಾಟಗಾರರಿಗೆ ತರಬೇತಿ ನೀಡುವುದು, ಕಾನೂನು ಸಲಹೆ ಒದಗಿಸುವುದು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯ ನಿರ್ವಹಿಸುವ ಉದ್ದೇಶಗಳೊಂದಿಗೆ ರಾಷ್ಟ್ರ ಮಟ್ಟದ ಮಟ್ಟದಲ್ಲಿ ಎಪಿಸಿಆರ್ ಸಂಘಟಿಸಲಾಯಿತು. ರಾಜ್ಯದಲ್ಲೂ ಈ ಸಂಘಟನೆಯು ಧೈರ್ಯದಿಂದ, ತಾತ್ವಿಕ ನಿಲುವಿನಿಂದ, ಸಮರ್ಪಿತ ಭಾವದಿಂದ ಕಾನೂನು ಮತ್ತು ಮಾನವೀಯ ಮೌಲ್ಯಗಳ ಪರ ಹೋರಾಟ ಮುಂದುವರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಸಂಚಾಲಕ ಆರ್.ಟಿ.ನಟರಾಜ್ ಮಾತನಾಡಿ, ಜನಸಾಮಾನ್ಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ಪರಿಚಯಿಸುವುದು. ಬಡವರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನೆರವು ಮತ್ತು ಮಾರ್ಗದರ್ಶನ ನೀಡುವುದು. ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು. ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡಲಾಗುವುದು. ಅಕ್ರಮ, ದೌರ್ಜನ್ಯ ಹಾಗೂ ಶೋಷಣೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಹೋರಾಟ ಮಾಡುವುದು ಸಂಘಟನೆ ಉದ್ದೇಶ ಎಂದು ಹೇಳಿದರು.

ಸಂಚಾಲಕರಾದ ಎಸ್.ವಿ.ರಾಜಮ್ಮ, ಪ್ರೊ. ಎಚ್.ರಾಚಪ್ಪ, ಬಿ.ಉಬೇದುಲ್ಲಾ, ವಹಾಬ್, ಪಾಂಡುರಂಗಪ್ಪ, ರಫೀಕ್, ಹಬೀಬ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net