

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಸ್ಥಿರಾಸ್ತಿಗಳ ರಿಜಿಸ್ಟ್ರೇಷನ್‌ಗೆ ಇ-ಖಾತಾ ಕಡ್ಡಾಯ ಮಾಡಿ ಜನರಿಗೆ ಸಂಕಷ್ಟ ತಂದಿಟ್ಟಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೇ ಶತಮಾನದ ಕಡತಗಳು ಡಿಜಿಟಲೀಕರಣ ಆಗದೆ ಅವನತಿಯತ್ತ ಸಾಗಿವೆ.
2017-18ನೇ ಸಾಲಿನ ಬಜೆಟ್‌ನಲ್ಲಿ ಹಳೆಯ ಕಡತಗಳ ಸುರಕ್ಷತೆಗೆ ‘ಸುರಭಿ ಯೋಜನೆ’ (ಸೂಕ್ಷ್ಮ ರಕ್ಷಣಾ ಅಭಿಲೇಖ) ೋಷಣೆ ಮಾಡಿ ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟರೂ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರದ ದಾರಿ ತಪ್ಪಿಸುವ ಉದ್ದೇಶಕ್ಕೆ ಕೇಂದ್ರ ಕಚೇರಿ ಅಧಿಕಾರಿಗಳು ನೆಪಕ್ಕೆ ಗಾಂಧಿನಗರ ಉಪ ನೋಂದಣಿ ಕಚೇರಿಯಲ್ಲಿ ಹಳೇ ಕಡತಗಳ ಡಿಜಿಟಲೀಕರಣಕ್ಕೆ ಚಾಲನೆ ಕೊಟ್ಟು ಅರ್ಧಕ್ಕೆ ಹಳ್ಳ ಹಿಡಿಸಿದ್ದಾರೆ. ಈಗಲೂ 2004ರ ಹಿಂದಿನ ಎನ್ಕಂಬರೆನ್ಸ್ ಸರ್ಟಿಫಿಕೇಟ್ (ಸಿಸಿ) ಮತ್ತು ಋಣಭಾರ ಪ್ರಮಾಣಪತ್ರ(ಇಸಿ)ಗಳನ್ನು ಜೆರಾಕ್ಸ್ ತೆಗೆದು ನೀಡಲಾಗುತ್ತಿದೆ. ಆದರೂ ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿಗೆ ಇ-ಖಾತಾವನ್ನು ಕಂದಾಯ ಇಲಾಖೆ ಕಡ್ಡಾಯ ಮಾಡಿರುವುದು ವಿಪರ್ಯಾಸ.
ರಾಜ್ಯದಲ್ಲಿ 256 ಸಬ್‌ರಿಜಿಸ್ಟ್ರಾರ್ ಕಚೇರಿಗಳಿವೆ. ಪ್ರತಿ ಕಚೇರಿಯಲ್ಲಿ ವರ್ಷಕ್ಕೆ ಅಂದಾಜು 24 ಲಕ್ಷ ದಸ್ತಾವೇಜುಗಳು ನೋಂದಣಿ ಆಗಲಿದ್ದು, 24 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಕಡತಗಳ ಸುರಕ್ಷತೆಗೆ ಅಧಿಕಾರಿಗಳು ಗಮನ ಅರಿಸಿಲ್ಲ.
ಇದನ್ನು ಮನಗೊಂಡು ಸಿಎಂ ಸಿದ್ದರಾಮಯ್ಯ, ದಾಖಲೆಗಳ ಸುರಕ್ಷಣೆ ಮತ್ತು ಅಕ್ರಮ ಚಟುವಟಿಕೆ ತಡೆಯಲು 2017-18ನೇ ಸಾಲಿನ ಬಜೆಟ್‌ನಲ್ಲಿಯೇ ಹಳೆಯ ಕಡತಗಳ ಸುರಕ್ಷತೆಗೆ ‘ಸುರಭಿ ಯೋಜನೆ’ (ಸೂಕ್ಷ್ಮ ರಕ್ಷಣಾ ಅಭಿಲೇಖ) ೋಷಿಸಿ 25 ಕೋಟಿ ರೂ. ಮೀಸಲಿಟ್ಟಿದ್ದರು. ಇದೀಗ 2ನೇ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಆದರೂ ಯೋಜನೆ ಪೂರ್ಣವಾಗಿಲ್ಲ. ಡಿಜಿಟಲ್ ಯೋಜನೆಗೆ ಟೆಂಡರ್ ಕರೆದು ಗಾಂಧಿನಗರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಬೇಕಾಬಿಟ್ಟಿ ಪ್ರಾಯೋಗಿಕವಾಗಿ ಜಾರಿಗೆ ತಂದು ಪೂರ್ಣ ಮಾಡದೆ ಕೈಬಿಟ್ಟಿದ್ದಾರೆ. 2004ಕ್ಕೂ ಮೊದಲು ಕೆಲ ವರ್ಷ ಕಳಪೆ ಕಾಗದ ಬಳಕೆ ಮಾಡಿರುವುದು ಕಂಡು ಬಂದಿದೆ. ಆದರಿಂದ ದಾಖಲೆಗಳು ನಶಿಸಿ ಹೋಗಿವೆ. ಅರ್ಜಿದಾರರಿಗೆ ನಕಲು ದಾಖಲೆ ಸಿಗದೆ ಪರದಾಡುತ್ತಿದ್ದಾರೆ. ಆದರೂ ಕೇಂದ್ರ ಕಚೇರಿ ಅಧಿಕಾರಿಗಳು ಗಮನ ಕೊಡದೇ ನಿರ್ಲಕ್ಷ್ಯ ತೋರಿಸುವ ಮಹತ್ವದ ಯೋಜನೆಗೆ ಎಳ್ಳು ನೀರು ಬಿಟ್ಟಿದ್ದಾರೆ.
ಸುಲಭ ಲಭ್ಯ ‘ಸುರಭಿ’ ಆಶಯ
ಕರ್ನಾಟಕದ ಈಗಿನ ಕೆಲ ಭೂಭಾಗಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯಗಳಲ್ಲಿದ್ದವು. ಆದರಿಂದ ಉರ್ದು, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಭಾಷೆಗಳಲ್ಲಿ ದಾಖಲೆಗಳು ಇವೆ. 1867 ರಿಂದ 2004ರ ವರೆಗೆ ಆಸ್ತಿ ಕ್ರಯ, ಕರಾರು, ದಾನ, ವಿಲ್ ಮತ್ತು ವಿಭಾಗ ಇನ್ನಿತ್ತರ ನೋಂದಣಿ ದಸ್ತಾವೇಜುಗಳನ್ನು ಆಯಾ ತಾಲೂಕು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬಟ್ಟೆ ಕಟ್ಟಿ ಜೋಡಿಸಲಾಗಿದೆ. ವಿಧಾನಸೌಧ, ಹೈಕೋರ್ಟ್, ರಾಜಭವನ ಸೇರಿ ಐತಿಹಾಸಿಕ ಕಟ್ಟಡ, ಭೂಮಿಯ ದಾಖಲೆಗಳ ಸಮೇತ ಅಂದಾಜು 5.70 ಕೋಟಿ ಪುಟಗಳನ್ನು ಸಂಗ್ರಹಿಸಲಾಗಿದೆ. ಪ್ರತಿಯೊಂದು ಪುಟಗಳನ್ನು ಸ್ಕಾೃನಿಂಗ್ ಮತ್ತು ಡಿಜಿಟೈಸ್ ಮಾಡಿ ಸಂರಕ್ಷಣೆ ಮಾಡಬೇಕು. ಕೇಂದ್ರ ಕಚೇರಿಯ ಸೆಂಟ್ರಲ್ ಸರ್ವರ್‌ನಲ್ಲಿ ಸಂಗ್ರಹಿಸುವುದು ಸುರಭಿ ಯೋಜನೆ ಉದ್ದೇಶವಾಗಿತ್ತು. ಜನರು ಸುಲಭವಾಗಿ ಅರ್ಜಿ ಸಲ್ಲಿಸಿ ಸಿಸಿ ಮತ್ತು ಇಸಿ ಪಡೆಯಬೇಕೆಂಬುದು ಯೋಜನೆ ಆಶಯವಾಗಿತ್ತು.
ಇಲಿ, ಜಿರಲೆಗಳಿಗೆ ಆಹಾರ!
141 ವರ್ಷಗಳ ಹಳೇ ಕಡತಗಳನ್ನು ಬಟ್ಟೆಯಲ್ಲಿ ಕಟ್ಟಿ ಸಂಗ್ರಹಿಸಲಾಗಿದೆ. ಸಿಸಿ ಮತ್ತು ಇಸಿ ಕೋರಿ ಅರ್ಜಿ ಸಲ್ಲಿಸಿದರೆ ಕಡತ ತೆಗೆದು ಕೈಯಾಡಿಸಿ ಜೆರಾಕ್ಸ್ ತೆಗೆದು ಅಧಿಕಾರಿ ಸಹಿ ಮಾಡಿ ಕೊಡಬೇಕಿದೆ. ಶತಮಾನದ ಕಡತಗಳು ಪದೇಪದೆ ಬಳಸುತ್ತಿದ್ದರೆ ನಾಶವಾಗುತ್ತಿವೆ. ಅಲ್ಲದೆ, ಇಲಿ, ಜಿರಲೆಗಳಿಗೆ ಆಹಾರವಾಗುತ್ತಿವೆ. ನಕಲು ದಾಖಲೆ ಕೊಡಲು ಕನಿಷ್ಠ 3 ರಿಂದ 7 ದಿನಗಳು ಬೇಕಾಗುತ್ತಿದೆ. ಕೋರ್ಟ್ ವಿಚಾರಣೆಗೆ ತುರ್ತಾಗಿ ದಾಖಲೆ ಸಿಗುತ್ತಿಲ್ಲ. ಉದ್ದೇಶ ಪೂರ್ವಕವಾಗಿ ದಾಖಲೆ ನಾಶ ಮಾಡುವ ಅವಕಾಶಗಳಿವೆ.
ಡಿಜಿಟೈಸ್ ಆಗಬೇಕಾದ ದಸ್ತಾವೇಜು
ಹುಬ್ಬಳ್ಳಿ ಕಚೇರಿಯಲ್ಲಿ 7689 ವಾಲ್ಯೂಂ(1 ವಾಲ್ಯೂಂ=500 ಪುಟ), ಧಾರವಾಡ-10422, ಮಂಗಳಗೂರು ನಗರ-3705, ಮಂಗಳೂರು ತಾಲೂಕು-3129, ಮೈಸೂರು ದಕ್ಷಿಣ-8361, ಮೈಸೂರು ಉತ್ತರ- 4283, ತುಮಕೂರು- 7400, ಬಿಡಿಎ -1055, ದೇವನಹಳ್ಳಿ- 3367, ನೆಲಮಂಗಲ-3797, ಹೊಸಕೋಟೆ-4329, ಯಲಹಂಕ-2146, ಆನೇಕಲ್-3578, ಚಾಮರಾಜಪೇಟೆ-4743, ಕೆಂಗೇರಿ-3145, ಬೊಮ್ಮನಹಳ್ಳಿ- 7582, ಜಯನಗರ-3786, ಪೀಣ್ಯ- 10389, ರಾಜಾಜಿನಗರ- 4324, ವಿಜಯನಗರ-3188, ಇಂದಿರಾನಗರ- 6022, ಕೆ.ಆರ್.ಪುರ- 3856 ಹಾಗೂ ರಾಮನಗರ ಕಚೇರಿಯಲ್ಲಿ 3700 ವಾಲ್ಯೂಂ ದಸ್ತಾವೇಜು ಸ್ಕಾೃನಿಂಗ್-ಡಿಜಿಟೈಸ್ ಆಗದೆ ಬಾಕಿ ಉಳಿದಿವೆ.