

ಆಂಧ್ರಪ್ರದೇಶದಲ್ಲಿ ವಿಪರೀತ, ಮಳೆ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು ಅಪಾರ ಹಾನಿಯಾಗಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಪ್ರವಾಹ ಪರಿಹಾರಕ್ಕಾಗಿ 2,250 ಕೋಟಿ ರೂ.ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಹಾನಿ ವೀಕ್ಷಣೆಗಾಗಿ ಕೇಂದ್ರದಿಂದ ಅಧ್ಯಯನ ತಂಡವನ್ನು ಕಳಿಸಿ ಎಂದೂ ಕೇಳಿಕೊಂಡಿದ್ದಾರೆ.
ಆಂಧ್ರದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೂ ಈವರೆಗೆ ಸುಮಾರು 14 ಮಂದಿ ಸಾವನ್ನಪ್ಪಿದ್ದಾರೆ. ವಿವಿಧ ಇಲಾಖೆಗಳ ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 4,450 ಕೋಟಿ ರೂ. ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ‘ತನಿಷ್ಕ್ ಜಾಹೀರಾತಿನಂತೆ ಇದೆ ನನ್ನ ಬದುಕು…’ ಎಂದ ನಟಿ ರಿಚಾ
ಆಂಧ್ರಪ್ರದೇಶ ತುಂಬ ಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ತುರ್ತಾಗಿ 1,000 ಕೋಟಿ ರೂಪಾಯಿನ್ನಾದರೂ ಬಿಡುಗಡೆ ಮಾಡಬೇಕು ಎಂದಿದ್ದಾರೆ. ಕೊವಿಡ್-19 ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿದ್ದು, ಇದೀಗ ಮಳೆ, ಪ್ರವಾಹ ಮತ್ತಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)