ಆತಂಕ ಹುಟ್ಟಿಸಿದ ಜಿಬಿಎಸ್ ಸಿಂಡ್ರೋಮ್; ಪುಣೆಯಲ್ಲಿ ನೂರಕ್ಕೂ ಅಧಿಕ ಪ್ರಕರಣ ವರದಿ: ಸೊಲ್ಲಾಪುರದಲ್ಲಿ ಒಬ್ಬ ಸಾವು

2-6797cc23eadb3
Published on

ಬೆಂಗಳೂರು: ಉಸಿರಾಟ ಅಥವಾ ಜೀರ್ಣಾಂಗ ವ್ಯೂಹದ ಸೋಂಕಿನಿಂದ ಉಂಟಾಗುವ ಗಿಲೈನ್-ಬ್ಯಾರೆ ಸಿಂಡ್ರೋಮ್ (ಜಿಬಿಎಸ್) ಎಂಬ ವ್ಯಾಧಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಈ ಸೋಂಕಿಗೆ ಸೊಲ್ಲಾಪುರದಲ್ಲಿ ಒಂದು ಸಾವು ವರದಿಯಾಗಿದ್ದು, ಇದರಿಂದ ದೇಶದ ಜನರಲ್ಲಿ ನೂರಾರು ವರ್ಷಗಳ ಹಿಂದಿನ ಕಾಯಿಲೆಯ ಆತಂಕ ಸೃಷ್ಟಿಯಾಗಿದೆ.

ಜಿಬಿಎಸ್ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹಾಗೂ ಬಾಹ್ಯ ನರಮಂಡಲದ ಮೇಲೆ ದಾಳಿ ಮಾಡುವ ಅಪರೂಪದ ನರ ವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ, ವಿಶೇಷವಾಗಿ ಕ್ಯಾಂಪಿಲೋ ಬ್ಯಾಕ್ಟರ್ ಜೆಜುನಿ ಎಂಬ ವೈರಾಣುವಿನಿಂದ ಉಂಟಾಗುವ ಸೋಂಕು. ಇದು ಸಾಮಾನ್ಯವಾಗಿ ಬೇಯಿಸದ ಕೋಳಿ ಮಾಂಸ ಹಾಗೂ ಪಾಶ್ಚರೀಕರಿಸದ ಡೈರಿ ಉತ್ಪನ್ನಗಳಲ್ಲಿ ಕಂಡು ಬರುತ್ತದೆ. ಹಾಗಾಗಿ ಆಹಾರ ಸೇವನೆಯ ಬಗ್ಗೆ ಜನರು ಜಾಗರೂಕರಾಗಿರಬೇಕು. ನೂರಾರು ವರ್ಷಗಳ ಹಳೆಯ ಕಾಯಿಲೆಯಾಗಿರುವ ಜಿಬಿಎಸ್ ಪ್ರತಿ ಲಕ್ಷ ಜನರಲ್ಲಿ 1-2 ಪ್ರಕರಣಗಳು ವರದಿಯಾಗುತ್ತದೆ. ಆದರೆ ಪುಣೆಯಲ್ಲಿ ಒಮ್ಮೆಗೆ ನೂರು ಮಂದಿಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿರುವುದು ಭೀತಿಗೆ ಕಾರಣವಾಗಿದೆ. ಜನರು ಕುಡಿಯುವ ನೀರು ಸೇರಿ ಆಹಾರ ಸೇವನೆಯ ಬಗ್ಗೆ ಜಾಗೃತಿ ವಹಿಸಬೇಕು. ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಬೇಕು ಎಂದು ನರರೋಗ ತಜ್ಞ ಡಾ. ಸೂರ್ಯನಾರಾಯಣ ಶರ್ಮಾ ತಿಳಿಸಿದ್ದಾರೆ.

ದೀರ್ಘಕಾಲೀನ ಚಿಕಿತ್ಸೆ ಅಗತ್ಯ

ಜಿಬಿಎಸ್ ನಿಂದ ಮಿದುಳಿಗೆ ಯಾವುದೇ ರೀತಿಯ ಹಾನಿ ಆಗದಿದ್ದರೂ, ಕೈ ಕಾಲುಗಳ ಚಲನವಲನಕ್ಕೆ ಸಂಬಂಧಿಸಿದಂತೆ ನರವ್ಯೂಹಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ ವೈರಾಣು ಸೋಂಕು ತಾಗಿದ 2-3 ವಾರಗಳ ನಂತರ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿ ನರ ಮಂಡಲದ ರಕ್ಷಾ ಕವಚವನ್ನು ಹಾಳು ಮಾಡುತ್ತದೆ. ನಂತರದಲ್ಲಿ ನರಗಳ ದೌರ್ಬಲ್ಯ ಆರಂಭವಾಗುತ್ತದೆ. ಇದರಿಂದಾಗಿ ರೋಗಿಗೆ ತುರ್ತು ನಿಗಾ ಘಟಕದಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ನರ್ವ್ ಕಂಡೆಕ್ಷನ್ ಟೆಸ್ಟ್ ಹಾಗೂ ಬೆನ್ನಿನಿಂದ ನೀರು ತೆಗೆದು ಪರೀಕ್ಷೆ ನಡೆಸಿ ಕಾಯಿಲೆ ಯಾವ ರೀತಿಯದು ಎಂದು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇದರ ಚಿಕಿತ್ಸಾ ವೆಚ್ಚವು ದುಬಾರಿಯಾಗಿದ್ದು ದೈಹಿಕ ಸಮಸ್ಯೆಯ ಜೊತೆಗೆ ರೋಗಿ ಹಾಗೂ ಕುಟುಂಬದವರು ತೀವ್ರತರವಾದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ರೋಗ ಲಕ್ಷಣಗಳು

ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು, ಶಕ್ತಿಹೀನತೆ (ದೌರ್ಬಲ್ಯ) ಮತ್ತು ಪಾರ್ಶ್ವವಾಯು ಮುಂತಾದವು ಜಿಬಿಎಸ್​ನಿಂದ ಉಂಟಾಗಬಹುದು. ಈ ಲಕ್ಷಣಗಳು ಕಾಲುಗಳಿಂದ ಪ್ರಾರಂಭವಾಗಿ ದೇಹದ ಮೇಲ್ಭಾಗಕ್ಕೆ ವಿಸ್ತರಿಸುತ್ತದೆ. ವಾಕರಿಕೆ, ವಾಂತಿ, ಹೊಟ್ಟೆನೋವು, ಅತಿಸಾರ ಆರಂಭಿಕ ಲಕ್ಷಣಗಳಾಗಿದ್ದು, ಗಂಭೀರ ಹಂತಕ್ಕೆ ತಲುಪಿದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇದೇ ಅಲ್ಲದೆ ಅಸ್ಥಿರ ನಡಿಗೆ, ಮೆಟ್ಟಿಲುಗಳನ್ನು ಏರಲು ಅಥವಾ ಇಳಿಯಲು ಅಸಮರ್ಥತೆ, ಮಾತನಾಡುವುದು, ಅಗಿಯುವುದು ಅಥವಾ ನುಂಗುವಾಗ ಮುಖ ಚಲನೆಯಲ್ಲಿ ತೊಂದರೆ, ದೃಷ್ಟಿಗೆ ಎರಡೆರಡಾಗಿ ಕಾಣಿಸುವುದು ಅಥವಾ ಕಣ್ಣುಗಳ ಚಲನೆಗೆ ಕಷ್ಟ ಮತ್ತು ನೋವಾಗುವುದು, ರಾತ್ರಿ ವೇಳೆ ಇನ್ನೂ ತುಂಬಾ ಕಷ್ಟವಾಗುವುದು, ಮೂತ್ರ ಮತ್ತು ಮಲ ವಿಸರ್ಜನೆ ಸಮಸ್ಯೆ, ಹೃದಯ ಬಡಿತ ಹೆಚ್ಚಳ, ಲೋ ಮತ್ತು ಹೈ ಬಿಪಿ ಹಾಗೂ ಉಸಿರಾಟಕ್ಕೆ ಸಮಸ್ಯೆ ಕೂಡ ಬಿಜಿಎಸ್​ನ ಇತರ ಲಕ್ಷಣಗಳಾಗಿವೆ.

ನರವ್ಯೂಹ ಸಮಸ್ಯೆ

ನರವ್ಯೂಹದ ಸಮಸ್ಯೆಗಳಲ್ಲಿ ತೀರಾ ಅಪರೂಪವಾಗಿರುವ ಜಿಬಿಎಸ್ ಕಾಯಿಲೆಗೆ ನಿಖರ ಕಾರಣ ತಿಳಿದಿಲ್ಲ. ಇದರ ರೋಗ ಲಕ್ಷಣ ಕಂಡು ಬರುವ ಆರುವಾರಗಳ ಮೊದಲೇ ಮೂರನೇ ಎರಡರಷ್ಟು ಜನರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸುತ್ತವೆ. ಈ ಸೋಂಕಿನಲ್ಲಿ ಕೋವಿಡ್-19 ಸಹಿತ ಉಸಿರಾಟ ಅಥವಾ ಜೀರ್ಣಾಂಗವ್ಯೂಹದ ಸೋಂಕು ಇರುವ ಸಾಧ್ಯತೆಯಿದೆ. ಜಿಕಾ ವೈರಸ್​ನಿಂದ ಕೂಡ ಜಿಬಿಎಸ್ ಉಂಟಾಗುವ ಸಾಧ್ಯತೆಯಿದೆ.

ಎಚ್ಚರಿಕೆ ಕ್ರಮಗಳು

ಸೋಂಕಿನ ಅಪಾಯ ತಡೆಯಲು ಆಹಾರ ನಿರ್ವಹಣೆ, ತಯಾರಿಕೆ ಮತ್ತು ಸೇವನೆಯಲ್ಲಿ ಎಚ್ಚರವಹಿಸಬೇಕು ಪಾಶ್ಚರೀಕರಿಸದ ಹಾಲು, ಡೈರಿ ಉತ್ಪನ್ನಗಳ ಬಳಕೆಯನ್ನು ತಪ್ಪಿಸಬೇಕು, ಈ ಹಾನಿಕಾರಕ ಬ್ಯಾಕ್ಟೀರಿಯಾ ತೆಗೆದುಹಾಕಲು ಆಹಾರವನ್ನು ಚೆನ್ನಾಗಿ ಬೇಯಿಸಬೇಕು,ಶುದ್ಧ ಆಹಾರ, ನೀರು ಸೇವನೆಯ ಜತೆಗೆ ಕೈ ಸೇರಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಬೇಯಿಸಿ ಸೇವಿಸಬೇಕು, ಕಚ್ಚಾ ಮಾಂಸ ಮತ್ತು ಇತರ ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಕತ್ತರಿಸುವ ಸಾಧನ ಹಾಗೂ ಪಾತ್ರೆಗಳನ್ನು ಬಳಸಿ.

ಜಿಬಿಎಸ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಿಸಿದೆ. ರಾಜ್ಯದಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಈ ಕಾಯಿಲೆ ಬಗ್ಗೆ ಅಧ್ಯಯನ ಹಾಗೂ ಹೆಚ್ಚಿನ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ. ಹಾಗೆಯೇ ಜನರು ಸಹ ಕುಡಿಯುವ ನೀರು, ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. | ಡಾ. ಪಿ.ಎಂ. ಸೂರ್ಯನಾರಾಯಣ ಶರ್ಮಾ ನರರೋಗ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net