

ನಿತ್ಯ ಬಳಸುವ ಅಕ್ಕಿ, ಬೇಳೆಯಿಂದ ಹಿಡಿದು ಬಾಯಿ ರುಚಿ ತಣಿಸುವ ತರಹೇವಾರಿ ತಿಂಡಿಗಳೂ ವಿಷಕಾರಕ ರಾಸಾಯನಿಕಗಳಿಂದ ಕಲಬೆರಕೆಗೊಂಡು ಅಡುಗೆಮನೆ ಸೇರುತ್ತಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯಕ್ಕೆ ಹಾನಿಕಾರಕವೆಂಬ ಕಾರಣದಿಂದ ರಾಜ್ಯದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಸೇರಿ ಇನ್ನಿತರ ಪದಾರ್ಥಗಳ ಮಾರಾಟ ನಿಷೇಧಗೊಂಡಿದ್ದರೂ, ಗುಣಮಟ್ಟವಿಲ್ಲದ, ಕಲಬೆರಕೆ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಆಹಾರ ಪದಾರ್ಥಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ.
ಕರ್ನಾಟಕ ನಂ.2: ಕಳಪೆ ಗುಣಮಟ್ಟದ ಹಾಗೂ ಕಲಬೆರಕೆ ಆಹಾರ ಮಾರಾಟ ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯನ್ವಯ 2024ರಿಂದ 2025ರ ಮಾ.25ರವರೆಗೆ 135 ಆಹಾರ ಮಾರಾಟ ಸಂಸ್ಥೆಗಳ ನೋಂದಣಿ ಹಾಗೂ ಪರವಾನಗಿಯನ್ನು ರಾಜ್ಯದಲ್ಲಿ ರದ್ದುಪಡಿಸಲಾಗಿದೆ. ಇದೇ ಅವಧಿಯಲ್ಲಿ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಛತ್ತೀಸ್ಗಢದಲ್ಲಿ 171 ಸಂಸ್ಥೆಗಳ ನೋಂದಣಿ ಹಾಗೂ ಲೈಸೆನ್ಸ್ ರದ್ದುಪಡಿಸಲಾಗಿದೆ. 134 ಮಾರಾಟ ಸಂಸ್ಥೆಗಳ ಲೈಸೆನ್ಸ್ ರದ್ದಾಗಿರುವ ತಮಿಳುನಾಡು 3ನೇ ಸ್ಥಾನದಲ್ಲಿ ಇದೆ. ಕರ್ನಾಟಕದಲ್ಲಿ 2021-22ರಲ್ಲಿ 86 ಸಂಸ್ಥೆ, 2022-23ರಲ್ಲಿ 143 ಹಾಗೂ 2023-24ರಲ್ಲಿ 149 ಆಹಾರ ಪದಾರ್ಥ ಮಾರಾಟ ಸಂಸ್ಥೆಗಳ ನೋಂದಣಿ ಮತ್ತು ಪರವಾನಗಿ ರದ್ದುಪಡಿಸಲಾಗಿದೆ.
ಸುಳ್ಳು ಲೇಬಲ್ ಬಳಕೆ: ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಅನ್ವಯ ಆಹಾರ ಮತ್ತು ಪಾನೀಯಗಳ ಸಂಗ್ರಹಣೆ, ವಿಂಗಡಣೆ ಮತ್ತು ನೈರ್ಮಲ್ಯದ ಬಗ್ಗೆ ಪರಿಶೀಲನೆ ನಡೆಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು, 2023-24ರ ಅವಧಿಯಲ್ಲಿ ದೇಶಾದ್ಯಂತ 170513 ಆಹಾರ ವಸ್ತುಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ರಾಜ್ಯದಲ್ಲಿ ಇಡ್ಲಿ ತಯಾರಿಸುವ 251 ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. 251ರಲ್ಲಿ 51 ಮಾದರಿ ಅಸುರಕ್ಷಿತವೆಂದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿತ್ತು. ಇದು ಆರೋಗ್ಯಕ್ಕೆ ಹಾನಿಕಾರಕವೆಂಬುದು ಸಾಬೀತಾಗಿತ್ತು.
ಕಲಬೆರಕೆ ಆಹಾರ, ಅಸುರಕ್ಷಿತ ಆಹಾರ, ಕಳಪೆ ಗುಣಮಟ್ಟದ ಆಹಾರ, ಆಹಾರದಲ್ಲಿನ ದೋಷಗಳನ್ನು ಲೇಬಲ್ ಮಾಡುವುದು ಮತ್ತು ದಾರಿತಪ್ಪಿಸುವ ಜಾಹೀರಾತುಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ನಿಗಾ ವಹಿಸಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ನಿರ್ವಹಿಸಲು ಆನ್ಲೈನ್ ಆಹಾರ ಸುರಕ್ಷತಾ ಅನುಸರಣಾ ವ್ಯವಸ್ಥೆ (ಫೋಸ್ಕೋಸ್) ಜಾರಿಗೆ ತರಲಾಗಿದೆ. ಸಹಾಯವಾಣಿ, ವೆಬ್ ಪೋರ್ಟಲ್, ವಾಟ್ಸ್ ಆಪ್, ಟ್ವಿಟರ್, ಫೇಸ್ಬುಕ್ ಸೇರಿ ಯಾವುದೇ ವೇದಿಕೆಗಳಿಂದ ದೂರು ಬಂದರು ಗಂಭೀರವಾಗಿ ಪರಿಗಣಿಸುತ್ತಿದೆ.