

Anushka Shetty: ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಚಿತ್ರದ ರಿಲೀಸ್ ಕುರಿತು ನಟಿಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸುವುದು ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದ್ದು, ಪ್ರಸ್ತುತ ಅನುಷ್ಕಾ ಕೈಯಲ್ಲಿ 7 ಚಿತ್ರಗಳಿವೆ ಎಂದು ಹೇಳಲಾಗಿದೆ.
'ಅರುಂಧತಿ', 'ಬಿಲ್ಲಾ', 'ವೇದಂ', 'ಪಂಚಾಕ್ಷರಿ', 'ಖಲೇಜಾ', 'ಮಿರ್ಚಿ', 'ಬಾಹುಬಲಿ', 'ಭಾಗಮತಿ', 'ಸೈಜ್ ಝೀರೋ' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅನುಷ್ಕಾ ಮಿಂಚಿದ್ದಾರೆ. ಸೂಪರ್ ಹಿಟ್, ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಸ್ವೀಟಿ, ಈಗ ತಮ್ಮ ಮುಂಬರುವ ಬಹುನಿರೀಕ್ಷಿತ ಘಾಟಿ ರಿಲೀಸ್ಗೆ ಎದುರುನೋಡುತ್ತಿದ್ದಾರೆ. ಇದೆಲ್ಲದರ ನಡುವೆ ಸದ್ದಿಲ್ಲದ್ದಂತೆ ಬರೋಬ್ಬರಿ 7 ಸಿನಿಮಾಗಳಲ್ಲಿ ಸಖತ್ ಬಿಜಿಯಾಗಿರುವ ಅನುಷ್ಕಾ, ಇದ್ಯಾವುದರ ಮಾಹಿತಿಯನ್ನು ಬಿಟ್ಟುಕೊಡದೆ ಕೆಲಸ ಮಾಡುತ್ತಿರುವುದು ಗಮನಾರ್ಹ.
ಸಿನಿ ವರದಿಗಳ ಪ್ರಕಾರ, ಪ್ರಸ್ತುತ ಅನುಷ್ಕಾ ಅವರು 'ಘಾಟಿ' ಮತ್ತು ಮಲಯಾಳಂನ 'ಕಥನಾರ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗಳು ಶೀಘ್ರವೇ ತೆರೆಗೆ ಬರಲು ಸಜ್ಜಾಗಿವೆ. ಇದರೊಂದಿಗೆ ಅನುಷ್ಕಾ ಕೈಯಲ್ಲಿ ಈ ಎರಡು ಚಿತ್ರಗಳು ಸೇರಿದಂತೆ ಒಟ್ಟು ಏಳು ಸಿನಿಮಾಗಳಿವೆ. ಆದರೆ, ತಮ್ಮ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸಿನಿಮಾ ಕುರಿತಂತೆ ಯಾವ ಮಾಹಿತಿಯನ್ನು ಬಹಿರಂಗಪಡಿಸದಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ತೆಲುಗಿನಲ್ಲಿ ಮೂರು, ತಮಿಳಿನಲ್ಲಿ ಎರಡು ಮತ್ತು ಮಲಯಾಳಂನಲ್ಲಿ ಎರಡು ಸಿನಿಮಾಗಳಲ್ಲಿ ಅನುಷ್ಕಾ ನಟಿಸುತ್ತಿದ್ದು, ಅವುಗಳ ಪೈಕಿ ಒಂದರಲ್ಲಿ ನಟ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ ಎಂಬ ವದಂತಿ ಇದೆ. ಅಸಲಿಗೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವವರೆಗೂ ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).