'ಸ್ವೀಟಿ' ಅಭಿನಯದ 'ಘಾಟಿ' ರಿಲೀಸ್ ಮುಂದೂಡಿಕೆ!? ಬಹುನಿರೀಕ್ಷಿತ ಚಿತ್ರದ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್​ | Ghaati

ವಿಜಯವಾಣಿ (8)
Published on

Ghaati: ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಘಾಟಿ' ಚಿತ್ರದ ರಿಲೀಸ್​ ಯಾವಾಗ? ಎಂಬ ಪ್ರಶ್ನೆ ಸದ್ಯ ನಟಿಯ ಅಭಿಮಾನಿಗಳು ಮತ್ತು ಸಿನಿಪ್ರಿಯರಲ್ಲಿ ಕಾಡುತ್ತಿದೆ. ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸುವುದು ಮಾತ್ರ ಬಾಕಿ ಉಳಿದಿದೆ.

"ವೇದಂ" ನಂತರ ಅನುಷ್ಕಾ ಮತ್ತು ಕ್ರಿ ಶ್ ಜೋಡಿ ಎರಡನೇ ಬಾರಿಗೆ ತೆರೆ ಮೇಲೆ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ. ಘಾಟಿ ಚಿತ್ರದ ಟೀಸರ್ ಬಹಳ ಹಿಂದೆಯೇ ಬಿಡುಗಡೆಯಾಗಿದ್ದು, ಚಿತ್ರದ ಡಿಜಿಟಲ್​ ಹಕ್ಕುಗಳು ಅಮೆಜಾನ್ ಪ್ರೈಮ್ ವೀಡಿಯೋ ಪಾಲಾಗಿದೆ. ಇಷ್ಟಾದರೂ ಸಹ ಚಿತ್ರ ಮಾತ್ರ ಇನ್ನೂ ತೆರೆಗೆ ಬಂದಿಲ್ಲ ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ. ಈ ಹಿಂದೆ ಚಿತ್ರತಂಡ, ಏಪ್ರಿಲ್ 18, 2025ರಂದು ಅನುಷ್ಕಾ 'ಘಾಟಿ' ತೆರೆಗೆ ಬರಲಿದೆ ಎಂದು ತಿಳಿಸಿತ್ತು. ಆದರೆ, ಇಲ್ಲಿಯವರೆಗೂ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯೂ ಹೊರಬಿದ್ದಿಲ್ಲ ಮತ್ತು ಟೀಸರ್​, ಟ್ರೇಲರ್​ ಅಥವಾ ಪೋಸ್ಟರ್​ಗಳು ಘೋಷಣೆಯಾಗಿಲ್ಲ ಎಂಬುದು ಗೊಂದಲಮಯ.

ರಿಲೀಸ್ ಡೇಟ್​ ಸಮೀಪದಲ್ಲಿದ್ದರೂ ತಯಾರಕರು ಮಾತ್ರ ಇನ್ನೂ ಮೌನ ತಾಳಿರುವುದು ಏಕೆ? ಇದು ಮುಂದೂಡಿಕೆಯ ಮುನ್ಸೂಚನೆಯೇ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡಿವೆ. ಇದೆಲ್ಲದರ ಮಧ್ಯೆ ಇತ್ತೀಚಿನ ಸಿನಿ ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಚಿತ್ರದ ಪ್ರಚಾರ ಕಾರ್ಯಗಳು ಪ್ರಾರಂಭವಾಗಲಿದ್ದು, ತಯಾರಕರು ವಿಶೇಷ ಪ್ರೋಮೋವನ್ನು ವಿನೂತನವಾಗಿ ಅನಾವರಣಗೊಳಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ ಘಾಟಿ ನಿರೀಕ್ಷಿಸಿದಂತೆ ಏ.18ರಂದು ತೆರೆಗೆ ಬರಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net