

ಬೆಂಗಳೂರು: ಕೋವಿಡ್-19 ಹಾಗೂ ಅದರ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ಡೌನ್ ಕಾರಣಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗರ್ಭಿಣಿಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು.
ಆ ಸಮೀಕ್ಷೆ ಎಷ್ಟು ನಿಜವಾಯಿತೋ ಗೊತ್ತಿಲ್ಲ. ಆದರೆ ಇದೀಗ ಲಾಕ್ಡೌನ್ ಅವಧಿಯಲ್ಲಿನ ತಮ್ಮ ಮೂರನೇ ಮಗುವನ್ನು ನಟ ಅನುಪಮ್ ಖೇರ್ ಎಲ್ಲರಿಗೂ ಪರಿಚಯಿಸಿದ್ದಾರೆ. 'ನಿಮ್ಮ ಅತ್ಯುತ್ತಮ ದಿನ ಇಂದೇ' ಎಂದು ಹೇಳುತ್ತ ಅವರು ತಮ್ಮ ಮೂರನೇ ಮಗುವಿನ ಬಗ್ಗೆ ಇಂದು ಹೇಳಿಕೊಂಡಿದ್ದಾರೆ.
ಅರೇ.. ಅನುಪಮ್ ಖೇರ್ಗೆ ಲಾಕ್ಡೌನ್ನಲ್ಲಿ ಮೂರನೇ ಮಗುವಾ! ಎಂದು ಯಾರೂ ಹುಬ್ಬೇರಿಸಿ ನೋಡುವಂತಿಲ್ಲ. ಇದು ಸಾಮಾನ್ಯ ಅರ್ಥದಲ್ಲಿನ ಮಗುವಲ್ಲ. ಖೇರ್ ತಮ್ಮ ಮೂರನೇ ಕೃತಿಯನ್ನು ಮೂರನೇ ಮಗು ಎನ್ನುತ್ತಲೇ ಅದರ ಬಗ್ಗೆ ಹೇಳಿದ್ದಾರೆ.
'ಯುವರ್ ಬೆಸ್ಟ್ ಡೇ ಈಸ್ ಟುಡೇ'. ಲೇಖಕನಾಗಿ ನಾನು ನನ್ನ ಮೂರನೇ ಮಗುವನ್ನು ಪರಿಚಯಿಸುತ್ತಿದ್ದೇನೆ. ನಾನು ಇದನ್ನು ಲಾಕ್ಡೌನ್ ಸಂದರ್ಭದಲ್ಲಿ ಬರೆದಿದ್ದೇನೆ. ನನ್ನ ಪ್ರಕಾಶಕರು ದೀಪಾವಳಿಯ ಈ ಶುಭದಿನದಂದು ಹೊಸ ಪುಸ್ತಕದ ಪ್ರಥಮ ಪ್ರತಿ ಕಳುಹಿಸಿಕೊಟ್ಟರು. ಇದನ್ನು ಬರೆಯುವುದರಿಂದ ಜೀವನ ಹಾಗೂ ಜನರ ಬಗ್ಗೆ ನನ್ನ ನೋಟ ಬದಲಾಗಿದೆ. ಇದು ನಿಮ್ಮ ಬದುಕಿನಲ್ಲೂ ಬದಲಾವಣೆ ತಂದೀತು ಎಂದು ಆಶಿಸುತ್ತೇನೆ ಎಂದು ಖೇರ್ ಹೇಳಿದ್ದಾರೆ.