ಜೂ.24ರಿಂದ ಶೃಂಗೇರಿ ಕಿರಿಯ ಶ್ರೀಗಳ ಅನುಗ್ರಹ

sringeri jagadguru Vidhushekhara Sawamji
ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ
Published on

ಶಿವಮೊಗ್ಗ: ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಜೂ.24ರಿಂದ 26ರವರೆಗೆ ನಗರದಲ್ಲಿ ಭಕ್ತರನ್ನು ಅನುಗ್ರಹಿಸುವರು ಎಂದು ಶಿವಮೊಗ್ಗದ ಶಂಕರಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ್ ತಿಳಿಸಿದರು.

ಜಗದ್ಗುರು ದರ್ಶನದ ಸಂದರ್ಭದಲ್ಲಿ ಶ್ರೀ ಶೃಂಗೇರಿ ಶಂಕರಮಠದಲ್ಲಿ ಭೀಕ್ಷಾ ವಂದನೆ, ಪಾದಪೂಜೆ, ವಸ್ತ್ರ ಸಮರ್ಪಣೆ ಇತ್ಯಾದಿ ಎಲ್ಲಾ ಸೇವೆಗಳಿಗೆ ಅವಕಾಶವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂ.24ರ ಸಂಜೆ 6ಕ್ಕೆ ಶ್ರೀಗಳು ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪುರಪ್ರವೇಶ ಮಾಡಲಿದ್ದು ನಂತರ ಕೋಟೆ ರಸ್ತೆ ಮೂಲಕ ಶೋಭಾಯಾತ್ರೆ ನಡೆಯಲಿದೆ. ಸಂಜೆ 7ಕ್ಕೆ ಶ್ರೀ ಶೃಂಗೇರಿ ಶಂಕರಮಠದಲ್ಲಿ ಪೂರ್ಣಕುಂಬ ಸ್ವಾಗತ, ಧೂಳೀಪಾದಪೂಜೆ ನಡೆಯಲಿದೆ. 8ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ಶ್ರೀಗಳಿಂದ ನಡೆಯಲಿದೆ ಎಂದರು.
25ರಂದು ಬೆಳಗ್ಗೆ 6ಕ್ಕೆ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ 108 ನಾರಿಕೇಳ ಗಣಹೋಮ, 9ಕ್ಕೆ ಶ್ರೀ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳು ನಗರದ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡುವರು. ಸಂಜೆ 6ಕ್ಕೆ ಶ್ರೀ ಶಿವಮೊಗ್ಗದ 30ಕ್ಕೂ ಹೆಚ್ಚು ಭಜನ ಮಂಡಳಿಗಳ 500 ಮಾತೆಯರಿಂದ ಶ್ರೀ ಶಂಕರ ಭಗವತ್ಪಾದ ವಿರಚಿತ ಕಲ್ಯಾಣವೃಷ್ಟಿಸ್ತವ ಸ್ತೋತ್ರ, ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀಲಕ್ಷ್ಮೀ ನೃಸಿಂಹ ಕರುಣಾ ರಸ ಸ್ತೋತ್ರಗಳ ಮಹಾ ಸಮರ್ಪಣೆ ನಡೆಯಲಿದೆ. 6ಕ್ಕೆ ಗುರುವಂದನೆ ಹಾಗೂ ಶ್ರೀಗಳಿಂದ ಆರ್ಶೀವಚನ ಮತ್ತು 8ಕ್ಕೆ ಶ್ರೀ ಶೃಂಗೇರಿ ಶಂಕರಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದು ಹೇಳಿದರು.
26ರಂದು ಬೆಳಗ್ಗೆ 9ಕ್ಕೆ ಶಂಕರಮಠದ ಆವರಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಭಿನವ ವಿದ್ಯಾ ತೀರ್ಥ ಮಂಟಪ ನಿರ್ಮಾಣಕ್ಕೆ ಶ್ರುೀಗಳು ಶಂಕುಸ್ಥಾಪನೆ ನೆರವೇರಿಸುವರು. 11ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯಮಂದಿರದಲ್ಲಿ ಭಕ್ತಾದಿಗಳಿಗೆ ಫಲ, ಮಂತ್ರಾಕ್ಷತೆ ವಿತರಿಸುವರು. ಹೆಚ್ಚಿನ ಮಾಹಿತಿಗೆ ಮೊಬೈಲ್ (984413 7136, 9448943937)ಗೆ ಸಂಪರ್ಕಿಸಬಹುದು ಎಂದರು.
ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ.ನಟರಾಜ್ ಭಾಗವತ್, ಶಿವಶಂಕರ್, ಕೇಶವಮೂರ್ತಿ, ಚಂದ್ರಶೇಖರ್, ಮಂಜುನಾಥ್, ಚೇತನ್, ಲಕ್ಷ್ಮೀ ಶ್ರೀಧರ್, ಎಸ್.ನಾಗೇಶ್, ಕೃಷ್ಣಮೂರ್ತಿ, ಸುಧೀಂದ್ರ ಕಟ್ಟೆ, ರವಿಕುಮಾರ್, ವೆಂಕಟೇಶ್‌ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net