ತತ್ತ್ವದ ಘನ ರಹಸ್ಯ

Paramatma 31 Dec 19
Published on
ಪರಮಾತ್ಮ ಅವಿನಾಶಿ. ಇದು ಲೋಕಸತ್ಯ ಮಾತ್ರವಲ್ಲ, ಪಾರಮಾರ್ಥಿಕ ಸತ್ಯ. ನಾವು ಸಾಧಕರು. ಪರಮಾರ್ಥದ ಹಾದಿಯಲ್ಲಿ ನಾವು ನಡೆದರೆ, ‘ಪರಮಾತ್ಮಪದ’ ತಿಳಿಯಲು ಸಾಧ್ಯ. ಆದರೆ, ನಾವು ಯಾವುದು ನಿಜ? ಯಾವುದು ಮಿಥ್ಯ? ಎಂಬುದನ್ನು ತಿಳಿಯದೆ ಸದಾ ತೊಳಲುತ್ತಿರುತ್ತೇವೆ. ಸಾಧನೆಯ ಹಾದಿಯಲ್ಲಿ ಇರುವವರಿಗೂ ‘ಭ್ರಮೆ’ಯೆಂಬ ಭೂತ ಕವಿಯುವುದುಂಟು.ಮಹಲಿಂಗರಂಗನ ಮಾತನ್ನು ಕೇಳಿ

ಅಚ್ಚಬೆಳದಿಂಗಳಿನ ಪ್ರಭೆಯಲಿ

ಸ್ವಚ್ಛವಾದ ಸ್ಪಟಿಕಮಣಿಯ ಶಿ

ಲೋಚ್ಚಯದ ನಿಜವೇನು ತೋರದ ಭೇದ್ಯವಾದಂತೆ |

ಅಚ್ಚ ಬರಿಯರಿವಾಗಿ ತತ್ಸುಖ

ಪೆರ್ಚಿ ತನ್ನಯ ಬುದ್ಧಿಯೊಳು ಮಿಗೆ

ಬೆಚ್ಚಲದು ಪರಮಾತ್ಮಪದವೆಂದರಿತುಕೋ ಎಂದ || (7.9)

ಈ ಪದ್ಯದ ಸಾರಾರ್ಥವನ್ನು ಮೊದಲು ತಿಳಿಯೋಣ: ‘‘ಅಚ್ಚ ಬೆಳದಿಂಗಳು ಎಲ್ಲೆಲ್ಲೂ ಬಿದ್ದಿದೆ. ಅದರ ಪ್ರಭೆಯೋ ಸ್ವಚ್ಛವಾಗಿದೆ. ಇನ್ನೊಂದೆಡೆ ಸ್ವಾಭಾವಿಕ ಕಾಂತಿಯಿಂದ ಸ್ಪಟಿಕಮಣಿಯು ತನ್ನ ಪ್ರಭೆಯನ್ನು ಬೀರುತ್ತಿದೆ. ಇವೆರಡು ಅಭೇದ್ಯವಾಗಿಯೇ ತೋರುತ್ತಿದೆ. ಬರಿಯ ತಿಳಿವಳಿಕೆಯಿಂದ ಸುಖವು ಹೆಚ್ಚಿ ತನ್ನ ಬುದ್ಧಿಯೊಡನೆ ಹೊಂದಿಕೊಂಡಾಗ ಅದು ಪರಮಾತ್ಮಪದ ಎಂದೆನಿಸಿಕೊಳ್ಳುವುದು.’’

ಭೇದಬುದ್ಧಿಯು ಅಭೇದಬುದ್ಧಿಯಾದಾಗ ಭ್ರಮೆಗೆ ಅವಕಾಶವಿಲ್ಲ. ಬೆಳದಿಂಗಳೇ ಬೇರೆ; ಸ್ಪಟಿಕವೇ ಬೇರೆ. ಇವೆರಡರಿಂದ ಬರುತ್ತಿರುವ ಪ್ರಭೆ ಬೇರೆಬೇರೆ ಎಂಬ ತಿಳಿವಳಿಕೆ ಅಭೇದಗೊಂಡಾಗ ಭೇದಬುದ್ಧಿ ಇಲ್ಲವಾಗುತ್ತದೆ. ಮಹಲಿಂಗರಂಗನು ‘ಅಭೇದ್ಯವಾದಂತೆ’ ಎಂದಿದ್ದಾನೆ. ಬೆಳದಿಂಗಳಲ್ಲಿ ಇದು ಚಂದ್ರನ ಬೆಳಕೆಂದೂ ಇದು ಸ್ಪಟಿಕಶಿಲೆ ಎಂದೂ ಬಿಡಿಸಿ ತಿಳಿಯುವುದಕ್ಕೆ ಬರದೆ ಇರುವ ಹಾಗೆ - ಪರಮಾತ್ಮನ ಪದ. ಬೆಚ್ಚಲು - ಎಂಬ ಮಾತಿಗೆ ಚೆನ್ನಾಗಿ ಬೆಸುಗೆಯಿಂದ ಕೂಡಿಕೊಳ್ಳಲು ಎಂದು ಅರ್ಥ.

ಈ ಪದ್ಯದಲ್ಲಿ ಅಚ್ಚ, ಸ್ವಚ್ಛ, ಉಚ್ಚ, ಪೆರ್ಚಿ, ಬೆಚ್ಚ - ಎಂಬ ಪದಾವೃತ್ತಿ ಬಂದಿದೆ. ಇದು ಪದ್ಯಕ್ಕೆ ಆಲಂಕಾರಿಕ ಸೊಗಸನ್ನು ತಂದಿದೆ.

ಜೀವವು ಅದ್ವಯವೂ ಜ್ಞಾನಸ್ವರೂಪವೂ ಆದ ಬ್ರಹ್ಮದ ಸ್ವರೂಪವನ್ನು ತಿಳಿಯಲು ಯತಿಸುತ್ತಿರುತ್ತದೆ. ಆ ಜೀವವು ಒಂದೇ ವಿಷಯವನ್ನು ಮನಸ್ಸಿನಲ್ಲಿ ಹೊಂದಿರುತ್ತದೆ. ಕೇವಲ ಚಿದಾನಂದವೂ ಭಾವರಹಿತವೂ ಕೇವಲಸ್ವರೂಪವೂ ನಿರ್ಮಲರೂಪವೂ ಆಗಿರುವುದೋ ಅದೇ ಪರಮಾತ್ಮಪದ. ಮನಸ್ಸು ತಿರೋಹಿತವಾಗಬೇಕು. ಈ ಮಾತನ್ನು ಇನ್ನಷ್ಟು ಯೋಚಿಸುವುದಾದರೆ:

ತನ್ನ ನಿಜವನು ತಿಳಿದು ತಾ ಸಂ

ಪನ್ನ ಸುಖಮಯವಾಗಿ ತನ್ನಿಂ

ದನ್ಯವಹ ತನು ಕರಣಗಳ ಪ್ರಾರಬ್ಧಕರ್ಮವನು |

ಅನ್ಯರನುಭವದಂತೆ ಕಂಡವ

ಮುನ್ನಲೇ ಪರಿಹರಿಸಿ ನಿಂದ ನಿ

ಜೋನ್ನತಿಯೆ ಪರಮಾತ್ಮಪದವೆಂದರಿತುಕೋ ಎಂದ || (7.11)

ಈ ಪದ್ಯದ ಅರ್ಥವನ್ನು ಮೊದಲಿಗೆ ತಿಳಿಯೋಣ : ‘‘ತಾನು ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅನಂತರ ಉತ್ತಮ ಸುಖವನ್ನು ಪಡೆಯಬೇಕು. ತನ್ನಿಂದ ಬೇರೆಯಾದ ಶರೀರ ಮತ್ತು ಇಂದ್ರಿಯಗಳ ಪ್ರಾರಬ್ಧಕರ್ಮವನ್ನು ಇತರರು ಅನುಭವಿಸಿದ್ದನ್ನು ಕಂಡು ಎಚ್ಚರಗೊಂಡು ತನ್ನ ಉನ್ನತಿಯನ್ನು ಪಡೆಯುವುದೇ ಪರಮಾತ್ಮಪದ.’’

ಈ ಪದ್ಯದಲ್ಲಿ ‘ಸಂವಿದದ್ವಯನು’ ಎಂಬ ಮಾತು ಬಂದಿದೆಯಷ್ಟೆ. ಜೀವನವೆಂಬುದು ಅದ್ವಯವೂ ಹೌದು; ಜ್ಞಾನಸ್ವರೂಪವೂ ಹೌದು. ಇದು ಬ್ರಹ್ಮದ ಸ್ವರೂಪ. ಈ ಸ್ವರೂಪಕ್ಕೆ ಸಂವಿತ್ + ಅದ್ವಯ ಎಂದು ತಿಳಿಯಬೇಕು! ನಿರ್ವಿಷಯ ಎಂದರೆ ವಿಷಯ ಇಲ್ಲದವನು. ಸಾಧಕನು ಯಾವ ವಿಷಯವನ್ನು ಮನಸ್ಸಿಗೆ ತಂದುಕೊಳ್ಳದೆ ಇರುವುದೆಂದರ್ಥ. ಭಾವವಿರಹಿತ - ಎಂದರೆ ಮನಸ್ಸಿನಲ್ಲಿ ಯಾವ ಕಲ್ಪನೆಯೂ ಇರದೆ ಇರುವ ಸ್ಥಿತಿ.

ಬಗೆಯ ಸಕಲಾಕಾರವಾಗಿರ

ಲೊಗೆದು ತೋರ್ಪದು; ತಿಳಿಯಲಂತಾ

ಬಗೆಯಳಿಯೆ ತಾನಾಗಿ ತೋರ್ಪದಖಂಡವಸ್ತುವೆನೆ |

ನಿಗಮ ನಿಕರಂಗಳಿಗೆ ನಿಲುಕದ

ಸಗುಣ ನಿರ್ಗಣವೆನಿಸದಾ ಚಿ

ದ್ಘನವದು ಪರಮಾತ್ಮಪದವೆಂದರಿತುಕೋ ಎಂದ || (7.12)

ನಾವು ಲೋಕವನ್ನು ವಿಚಾರ ಮಾಡಿ ನೋಡಿದರೆ ಅದು ಸಕಲಾಕಾರವಾಗಿ ತೋರುತ್ತದೆ. ಇದು ನಾಶವಾಗಲು ಮನಸ್ಸು ಕಾರಣ. ವೇದಾರ್ಥಕ್ಕೂ ಸಗುಣ ನಿರ್ಗಣಗಳು ನಿಲುಕುವುದಿಲ್ಲ. ಇವು ಚಿದ್ಘನವೇ. ಇವೆರಡರಿಂದಲೂ ಪರಮಾತ್ಮಪದವನ್ನು ತಿಳಿಯಲು ಸಾಧ್ಯವಿಲ್ಲ.

ಕೆಲವು ಸಾಧಕರು ಸಗುಣೋಪಾಸನೆ ಮಾಡುತ್ತಾರೆ. ಮತ್ತೂ ಕೆಲವರು ನಿರ್ಗಣೋಪಾಸನೆ ಮಾಡುತ್ತಾರೆ. ಗುಣಸಹಿತವಾಗಿ ಮಾಡಿದರೆ ಅದು ಸುಗುಣೋಪಾಸನೆ. ಇದು ಪ್ರಾರಂಭದ ಹಂತದಲ್ಲಿ ಸಾಧಕರಿಗೆ ಬೇಕಾಗುತ್ತದೆ. ಆದರೆ, ಇಲ್ಲಿ ಪರಮಾತ್ಮಪದ ದೊರಕುವುದಿಲ್ಲ. ಮತ್ತೂ ಕೆಲವರು ಇದಕ್ಕೆ ವ್ಯತಿರಿಕ್ತವಾಗಿ ನಿರ್ಗಣೋಪಾಸನೆಗೆ ತೊಡಗುತ್ತಾರೆ. ಇವೆರಡು ಪರಮಪದದ ಕಡೆ ಒಯ್ಯಲು ಇರುವ ಸಾಧನಗಳೇ ಹೊರತು ಸಾಧ್ಯಗಳಲ್ಲ ಎಂಬುದನ್ನು ಸಾಧಕರು ಚೆನ್ನಾಗಿ ತಿಳಿಯುವುದು ಅವಶ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net