

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಶ್ರೀಧರ್ ಪೂಜಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠವು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಇದೇ ವೇಳೆ ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ಸೂಚಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಎರಡೆರಡು ಬಾರಿ ಎಫ್‌ಐಆರ್ ದಾಖಲಿಸಿರುವ ಪೊಲೀಸರ ಪರ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರು ಬದಲಾವಣೆಯಾದಾಗ ಹಳೆಯ ತಂಡದ ಪೊಲೀಸರ ವಿರುದ್ಧ ಹೊಸ ತಂಡದ ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ದಾಖಲಿಸಿರುವುದು ಎರಡನೇ ಎಫ್‌ಐಆರ್ ಇದಾಗಿದೆ. ಒಂದು ಎಫ್‌ಐಆರ್‌ನಲ್ಲಿ ಹೈಕೋರ್ಟ್ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಆದೇಶ ಮಾಡಿದೆ. ನಂತರ ಎಸ್‌ಐಟಿ ಎರಡನೇ ಎಫ್‌ಐಆರ್ ದಾಖಲಿಸಿದೆ. ಈಗಾಗಲೇ ಪ್ರಕರಣ ಸಂಬಂಧ ಬಂಧಿಸಿರುವ ಇತರೆ ಆರೋಪಿಗಳು ಅರ್ಜಿದಾರರ ವಿರುದ್ಧ ಯಾವುದೇ ಹೆಳಿಕೆ ನೀಡಿಲ್ಲ ಎಂದು ವಿವರಿಸಿದರು.
ಅಲ್ಲದೆ, ಪ್ರಕರಣ ನಡೆದ ನಾಲ್ಕು ವರ್ಷಗಳ ನಂತರ ಅರ್ಜಿದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ತನಿಖೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಆದರೂ ಅವರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಒಂದೊಮ್ಮೆ ಅವರ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರ ಪರ ವಕೀಲರು, ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ಕೆಲವು ಲೈವ್ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಬಿಟ್‌ಕಾಯಿನ್‌ಗಳನ್ನು ಕದಿಯಲಾಗಿದೆ. ಹಾಗಾಗಿ ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಸಾವಿರಾರೂ ಕೋಟಿ ರೂಪಾಯಿ ಮೌಲ್ಯದ ಹಗರಣ ಇದಾಗಿದೆ.
ಶ್ರೀಕಿ ಮತ್ತಿತರ ಆರೋಪಿಗಳ ವಿಚಾರದಲ್ಲಿ ಅರ್ಜಿದಾರರು ಸಮರ್ಪಕ ತನಿಖೆ ನಡೆಸಿಲ್ಲ. ಅವರೊಂದಿಗೆ ಶಾಮೀಲಾಗಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಹಾಗಾಗಿ, ಸದ್ಯ ಎಸ್‌ಐಟಿ ಸಮರ್ಪಕ ತನಿಖೆ ನಡೆಸುತ್ತಿದ್ದು, ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.