

ನವದೆಹಲಿ: ಒಂದೆಡೆ ಕರೊನಾ ಪಿಡುಗು ವಿಶ್ವಮಾರಿಯಾಗಿ ಕಾಡುತ್ತಿದ್ದರೆ, ಇನ್ನೊಂದೆಡೆ ಅದನ್ನು ಗುಣಪಡಿಸಲು ಸೂಕ್ತವಾದ ಔಷಧ ಪತ್ತೆ ಮಾಡುವ ಕಾರ್ಯ ವಿಶ್ವದಾದ್ಯಂತ ಸಾಗುತ್ತಿದೆ. ಹಲವು ಪ್ರಯೋಗಗಳು ಆರಂಭಿಕ ಹಂತದಲ್ಲಿ ಯಶಸ್ವಿಯಾಗಿದ್ದರೂ, ಮುಂದಿನ ಹಂತಗಳಲ್ಲಿ ವಿಫಲವಾಗುವ ಮೂಲಕ ಔಷಧ ತಯಾರಾಗುತ್ತದೋ ಇಲ್ಲವೋ ಎಂಬ ಅನುಮಾನ ಮೂಡುವಂತಾಗಿದೆ.
ಇಂಥ ಸಂದರ್ಭದಲ್ಲಿ ಹಾಲೆಂಡ್ನಲ್ಲಿ ನಡೆದಿರುವ ಒಂದು ಪ್ರಯೋಗದಲ್ಲಿ ಲ್ಯಾಬ್ ಮಟ್ಟದಲ್ಲಿ ರೂಪಿಸಲಾಗಿರುವ ಆ್ಯಂಟಿಬಾಡಿಯೊಂದು ಕರೊನಾ ವೈರಾಣುವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ತಕ್ಷಣವೇ ಅಲ್ಲದಿದ್ದರೂ ಶೀಘ್ರದಲ್ಲೇ ಕರೊನಾ ಸೋಂಕಿಗೆ ಔಷಧ ಪತ್ತೆಯಾಗುವ ಆಶಾಭಾವವಂತೂ ಮೂಡಿದೆ.
ಹಾಲೆಂಡ್ನ ಯುಟ್ರಚೆಟ್ ವಿಶ್ವವಿದ್ಯಾಲಯದ ಬೆರೆಂಡ್ ಜಾನ್ ಬಾಷ್ ಮತ್ತು ಅವರ ಸಹೋದ್ಯೋಗಿಗಳು ಈ ಆ್ಯಂಟಿಬಾಡಿಯನ್ನು ತಯಾರಿಸಿದ್ದಾರೆ. ಪ್ರಯೋಗಾಲಯದಲ್ಲಿ ಈ ಆ್ಯಂಟಿಬಾಡಿ ಕರೊನಾ ವೈರಸ್ ಅನ್ನು ಮಣಿಸಿದೆ. ಹಾಗೆಂದು ತಕ್ಷಣವೇ ಈ ಮದ್ದನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇನ್ನೂ ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಪ್ರಯೋಗಿಸಿದ ಮೇಲಷ್ಟೇ, ಸಾರ್ವಜನಿಕ ಚಿಕಿತ್ಸೆಗೆ ಬಿಡುಗಡೆ ಮಾಡಲು ಸಾಧ್ಯ ಎಂದು ಜರ್ನಲ್ ನೇಚರ್ ಕಮ್ಯುನಿಕೇಷನ್ ಎಂಬ ಜರ್ನಲ್ನಲ್ಲಿ ಪ್ರಕಟವಾಗಿರುವ ಪ್ರಬಂಧದಲ್ಲಿ ತಿಳಿಸಲಾಗಿದೆ.
ಈ ಆ್ಯಂಟಿಬಾಡಿಯನ್ನು ಸದ್ಯ 47ಡಿ11 ಎಂದು ಗುರುತಿಸಲಾಗಿದೆ. ಈ ಆ್ಯಂಟಿಬಾಡಿ ಕರೊನಾ ವೈರಸ್ಗೆ ಕಿರೀಟದ ಸ್ವರೂಪ ನೀಡುವ ಹಾಗೂ ಮಾನವನ ಕೋಶಗಳೊಗೆ ಪ್ರವೇಶಿಸಲು ಅವಕಾಶ ಮಾಡಿಕೊಡುವ ಸ್ಪೈಕ್ ಪ್ರೋಟೀನ್ ಮೇಲೆ ದಾಳಿ ಮಾಡಿ, ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಯುಟ್ರಚೆಟ್ನ ಪ್ರಯೋಗದಲ್ಲಿ ಕೇವಲ ಕರೊನಾ ವೈರಾಣು ಅಷ್ಟೇ ಅಲ್ಲ, ತೀವ್ರವಾದ ಉಸಿರಾಟದ ತೊಂದರೆಗೆ (ಎಸ್ಎಆರ್ಎಸ್-ಸಾರ್ಸ್) ಕಾರಣವಾಗುವ ಅದರ ಸಹೋದರ ಸಂಬಂಧಿ ಸಾರ್ಸ್ ವೈರಾಣುವನ್ನೂ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಬಂಧದಲ್ಲಿ ತಿಳಿಸಲಾಗಿದೆ.