

ಮೆಲ್ಬೋರ್ನ್: ಕರೊನಾ ವೈರಸ್ಗೆ ಔಷಧವಾಗಲಿ, ಲಸಿಕೆಯಾಗಲಿ ಇಲ್ಲ. ಬದಲಿಗೆ ಆ್ಯಂಟಿ ಮಲೇರಿಯಾ, ಆ್ಯಂಟಿ ಎಚ್ಐವಿ ಔಷಧಗಳಿಂದಲೇ ಕರೊನಾಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆ ಮೆಡಿಸಿನ್ಗಳಿಂದ ಸೈಡ್ ಎಫೆಕ್ಟ್ಗಳು ಆಗುತ್ತಿವೆ.
ಸದ್ಯ ಹೊಸ ಸಂಶೋಧನೆಯೊಂದು ಸಣ್ಣ ಭರವಸೆ ಹುಟ್ಟಿಸಿದೆ. ಆ್ಯಂಟಿ-ಪ್ಯಾರಾಸಿಟಿಕ್ ಔಷಧ ಐವರ್ಮೆಕ್ಟಿನ್ ಕರೊನಾ ವೈರಸ್ಗಳನ್ನು 48ಗಂಟೆಗಳಲ್ಲಿ ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ಮೊನಾಶ್ ವಿಶ್ವವಿದ್ಯಾಲಯದ ಬಯೋಮೆಡಿಸಿನ್ ಡಿಸ್ಕವರಿ ಸಂಸ್ಥೆ ಮತ್ತು ಪೀಟರ್ ಡೊಹೆರ್ಟಿ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷನ್ ಮತ್ತು ಇಮ್ಯೂನಿಟಿ ಜಂಟಿ ಅಧ್ಯಯನ ನಡೆಸಿದ್ದು, ಕರೊನಾ ವೈರಸ್ಗಳ ನಿರ್ಮೂಲನೆಯಲ್ಲಿ ಆ್ಯಂಟಿ ಪ್ಯಾರಾಸಿಟಿಕ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಈ ಆ್ಯಂಟಿ ಪ್ಯಾರಾಸಿಟಿಕ್ ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಜ್ವರಕ್ಕೆ, ದೇಹದೊಳಗೆ ಬೆಳೆಯುವ ಪರಾವಲಂಬಿ ಜೀವಿಗಳನ್ನು ಕೊಲ್ಲಲು ಈ ಔಷಧವನ್ನು ಬಳಸಲಾಗುತ್ತದೆ.
ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಕೈಲಿ ವ್ಯಾಗ್‌ಸ್ಟಾಫ್ ಅವರು ಮಾಹಿತಿ ನೀಡಿದ್ದು, ಆ್ಯಂಟಿ ಪ್ಯಾರಾಸಿಟಿಕ್ ಔಷಧದ ಒಂದು ಡೋಸ್ನಿಂದ ಆರ್ಎನ್ಎ ವೈರಸ್ಗಳು 48ಗಂಟೆಗಳಲ್ಲಿ ಮೂಲಭೂತವಾಗಿ ನಿರ್ಮೂಲನೆಯಾಗುವುದು ಕಂಡುಬಂತು. ಬರೀ 24ಗಂಟೆಯಲ್ಲಿ ವೈರಸ್ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂತು ಎಂದು ತಿಳಿಸಿದ್ದಾರೆ.
ಐವರ್ಮೆಕ್ಟಿನ್ (Ivermectin)ಪ್ರಮುಖ ಪ್ಯಾರಾಸಿಟಿಕ್ ಆಗಿದ್ದು, ಆಹಾರ ಮತ್ತು ಔಷಧಿ ಆಡಳಿತ ಮಂಡಳಿಯಿಂದ ಅನುಮೋದನೆಗೊಂಡಿದೆ. ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವೂ ಇದೆ. ಹಾಗೇ ಎಚ್ಐವಿ, ಡೆಂಘೆ, ಇನ್ಫ್ಲ್ಯೂಯೆಂಜಾ, ಝಿಕಾದಂತಹ ವ್ಯಾಪಕ ಶ್ರೇಣಿಯ ವೈರಸ್ಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡುವ ಶಕ್ತಿ ಹೊಂದಿದೆ.
ಈ ಪ್ಯಾರಾಸಿಟಿಕ್ನ್ನು ಮನುಷ್ಯರ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀಡಬೇಕು, ಚಿಕಿತ್ಸಾ ವಿಧಾನ ಹೇಗಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅಧ್ಯಯನ ಮಾಡಿ, ಮನುಷ್ಯರ ಮೇಲೆ ಪ್ರಯೋಗ ಮಾಡುವುದು ನಮ್ಮ ಮುಂದಿನ ಹೆಜ್ಜೆ ಎಂದು ವ್ಯಾಗ್‌ಸ್ಟಾಫ್ ತಿಳಿಸಿದ್ದಾರೆ. (ಏಜೆನ್ಸೀಸ್)