ದೇಶದ ಹಿಂದು ವಿರೋಧಿಗಳು ಅಪಾಯಕಾರಿ: ಸೂಲಿಬೆಲೆ

chakravarti
ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗದಲ್ಲಿ ಉಪನ್ಯಾಸ ನೀಡಿದರು.
Published on

ಶಿವಮೊಗ್ಗ: ಪಾಕಿಸ್ತಾನ, ಚೀನಾ ಮಾತ್ರ ನಮ್ಮ ಶತ್ರುಗಳಲ್ಲ. ದೇಶದ ಒಳಗಿರುವ ಹಿಂದು ಹಾಗೂ ಭಾರತ ವಿರೋಧಿ ಶಕ್ತಿಗಳು ಹೊರಗಿನ ಶತ್ರುಗಳಿಗಿಂತಲೂ ಅಪಾಯಕಾರಿ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕರ್ನಾಟಕ ಸಂಘದಿಂದ ಅಜೇಯ ಸಂಸ್ಕೃತಿ ಬಳಗ ಹಾಗೂ ಯುವಾ ಬ್ರಿಗೇಡ್‌ನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇನ್ನೂ ಮಲಗಿದ್ದರೆ ಏಳುವಾಗ ಭಾರತವಿರುವುದಿಲ್ಲ ಎಂಬ ವಿಷಯದ ಕುರಿತು ಮಾತನಾಡಿದ ಅವರು, ದೇಶದ ಒಳಗಿರುವ ಶಕ್ತಿಗಳಿಗೆ ಹಿಂದುಗಳನ್ನು ಟೀಕಿಸುವುದೇ ಕೆಲಸ. ಇವರ ಕುತಂತ್ರದ ಬಗ್ಗೆ ಸದಾ ಎಚ್ಚರದಿಂದ ಇರಲೇಬೇಕು ಎಂದರು.
2020ರಲ್ಲೇ ಸೇನಾ ದಂಡನಾಯಕ ಬಿಪಿನ್ ರಾವತ್ ಇದನ್ನು ಎಚ್ಚರಿಸಿದ್ದರು. ದೇಶದ ಗಡಿಯಲ್ಲಿನ ಶತ್ರುವನ್ನು ಗುರುತಿಸುವುದು, ಹಿಮ್ಮೆಟ್ಟಿಸುವುದು ಸುಲಭ. ಆದರೆ ಒಳಗಿರುವ, ನಮ್ಮ ಸುತ್ತಲೂ ಇರುವ ವಂಚಕರನ್ನು ದೇಶದ್ರೋಹಿಗಳನ್ನು ಪತ್ತೆ ಮಾಡುವುದು ಸುಲಭವಲ್ಲ ಎಂದು ರಾವತ್ ಹೇಳಿದ್ದರು. ಈಗ ಅದರ ಪರಿಣಾಮ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
ಭಾರತ ವಿಭಜನೆಯಾದ ಬಳಿಕ ಇಲ್ಲಿಯೇ ಉಳಿದ ಅನೇಕ ಮಂದಿಗೆ ಈ ರಾಷ್ಟ್ರ ನಮ್ಮದಲ್ಲ ಎಂಬ ಮನೋಭಾವ ಮೂಡಿತ್ತು. ಅವರಿಗೆ ನಾವು ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದೇ ಇಂದಿನ ಸಮಸ್ಯೆಗೆ ಕಾರಣ. ನೀವು ಮೂಲತಃ ಭಾರತೀಯರೇ, ಹಿಂದುಗಳೇ ಎಂದು ಅವರಿಗೆ ಹೇಳಬೇಕಿತ್ತು. ಈ ವಿಷಯದಲ್ಲಿ ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಅಜಾದ್ ಇತ್ತೀಚೆಗೆ ಹೇಳಿರುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಕಾಶ್ಮೀರದಲ್ಲಿ ಈಗ ಇರುವ ಮುಸ್ಲಿಂರ ಮೂಲ ಹಿಂದು ಧರ್ಮವೇ. ಬಳಿಕ ಅನೇಕರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ಅವರ ಹೇಳಿಕೆ ಸ್ವಾಗತಾರ್ಹ ಎಂದರು.
ದೇಶದೊಳಗೇ ಇದ್ದುಕೊಂಡು ರಾಷ್ಟ್ರ ವಿರೋಧಿಗಳಾಗಿ ಕೆಲಸ ಮಾಡುವವರು ಒಂದೆಡೆಯಾದರೆ, ಈಶಾನ್ಯ ರಾಜ್ಯಗಳಲ್ಲಿ ಮತಾಂತರ ಮಾಡುತ್ತ, ಗಲಭೆಗಳನ್ನು ಬೆಂಬಲಿಸುತ್ತಿರುವ ಮಿಷನರಿಗಳು ಇನ್ನೊಂದೆಡೆ. ಮೂರನೆಯವರು ಬುದ್ಧಿಜೀವಿಗಳು, ಮಾವೋವಾದಿಗಳು. ಅವರೆಲ್ಲರೂ ಹಿಂದು ವಿರೋಧಿ ಮನಸ್ಥಿತಿಯವರು. ಈಗ ಸಿಎಂ ಸಿದ್ದರಾಮಯ್ಯ ಸುತ್ತ ಇರುವವರು ಇದೇ ವರ್ಗಕ್ಕೆ ಸೇರಿದವರು ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net