

ಬೆಂಗಳೂರು: ಅಧಿಕಾರದ ಅವಧಿಯುದ್ದಕ್ಕೂ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನಿಸಿ, ಸಂವಿಧಾನಕ್ಕೆ ಅಪಚಾರ ಎಸಗಿದ ಕಾಂಗ್ರೆಸ್, ಸಂವಿಧಾನ ಬದಲಾಯಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಸುಳ್ಳು ಕಥಾನಕ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಲೇ ಇದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ವಾಗ್ದಾಳಿ ಮಾಡಿದರು.
ಭಾರತೀಯ ವಿದ್ಯಾ ಭವನದಲ್ಲಿ ಸಿಟಿಜನ್ಸ್ ಾರ್ ಸೋಷಿಯಲ್ ಜಸ್ಟೀಸ್ ಹಾಗೂ ಅಯೋಧ್ಯಾ ಪಬ್ಲಿಕೇಷನ್ಸ್ ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂವಿಧಾನ ಬದಲಾಯಿಸಿದ್ದು ಯಾರು ?’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂವಿಧಾನ ರಚನಾ ಸಭೆ (ಕಾನ್‌ಸ್ಟಿಟುವೆಂಟ್ ಅಸೆಂಬ್ಲಿ)ಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರವೇಶ ತಡೆಯಲು ಚುನಾವಣೆಯಲ್ಲಿ ಸೋಲಿಸಿದರು. ನಂತರ ಡಾ.ಶಮಾ ಪ್ರಸಾದ್ ಮುಖರ್ಜಿ, ಯೋಗೇಂದ್ರನಾಥ್ ಮಂಡಲ್ ಕೋರಿಕೆಯಂತೆ ಮುಂಬೈ ನಿವಾಸಿಯಾದ ಡಾ.ಅಂಬೇಡ್ಕರ್ ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದರು.
ಹಂಗಾಮಿ ಸರ್ಕಾರದ ಪ್ರಧಾನಿಯಾಗಿದ್ದ ನೆಹರು ಪರವಾಗಿದ್ದ ಹಲವರು ಸಂವಿಧಾನ ರಚನಾ ಸಭೆಯಲ್ಲಿ ಡಾ.ಅಂಬೇಡ್ಕರ್ ಮೇಲೆ ಬ್ರಿಟಿಷ್ ಏಜೆಂಟ್ ಎಂದು ದೂರಿದರು. ಸಂವಿಧಾನ ಕರಡು ರಚನಾ ಸಮಿತಿಗೆ ಬಾಬಾ ಸಾಹೇಬರನ್ನು ನೆಹರು ಒಲ್ಲದ ಮನಸ್ಸಿನಿಂದಲೇ ನೇಮಿಸಿದರು.
ಸಂವಿಧಾನದ 306 (ಎ) ಸೇರ್ಪಡೆಗೆ ಡಾ.ಅಂಬೇಡ್ಕರ್ ಬಲವಾಗಿ ವಿರೋಧಿಸಿದ್ದರು. ಅದೇ ಮುಂದೆ ಸಂವಿಧಾನದ 370ನೇ ವಿಧಿಯಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಈ ವಿಧಿಯನ್ನು ಡಾ.ಅಂಬೇಡ್ಕರ್ ಅನುಪಸ್ಥಿತಿಯಲ್ಲಿ ಸ್ವೀಕರಿಸಲಾಯಿತು.
ನಂತರ ಸಂವಿಧಾನ ರಚನಾ ಸಭೆ ಅಧ್ಯಕ್ಷ ಬಾಬುರಾಜೇಂದ್ರ ಪ್ರಸಾದ್ ರನ್ನು ಡಾ.ಅಂಬೇಡ್ಕರ್ ಭೇಟಿ ಮಾಡಿ ದೊಡ್ಡ ಪ್ರಮಾದವೆಂದು ವಿರೋಧಿಸಿದರು. ಎಂ.ಆರ್.ಜಯಕರ್ ವಿದ್ವಾನ್, ಸರ್ದಾರ ಪಟೇಲ್ ಇನ್ನಿತರರು ಒತ್ತಾಸೆಯಿಂದಾಗಿ ವಿಶೇಷ ಸ್ಥಾನಮಾನ ತಾತ್ಕಾಲಿಕವೆಂದು ತಿದ್ದುಪಡಿ ಮಾಡಲಾಯಿತು ಎಂದು ಡಾ.ಅರ್ಜುನ್ ರಾಮ್ ಮೇಘ್ವಾಲ್ ವಿವರಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವುದನ್ನು ವಿರೋಧಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರು ಪತ್ರ ಬರೆದಿದ್ದರು. ಇತರೆ ಹಿಂದುಳಿದ ವರ್ಗಗಳಿಗೆ ಮೀಸಲು ಅವಕಾಶ ಕಲ್ಪಿಸಿದ ಮಂಡಲ್ ಆಯೋಗದ ವರದಿಯನ್ನು ರಾಜೀವಗಾಂಧಿ ಶತಾಗತಾಯ ವಿರೋಧಿಸಿದರು.
ಅಷ್ಟೇ ಏಕೆ ಮೀಸಲು ವ್ಯವಸ್ಥೆಯನ್ನು ತೆಗೆದು ಹಾಕಲಾಗುವುದು ಎಂದು ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ಹೇಳಿದ್ದರು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ, ಸಂವಿಧಾನ ಪೀಠಿಕೆಯನ್ನೇ ತಿದ್ದುಪಡಿ ಮಾಡುವ ಮೂಲಕ ಸಂವಿಧಾನದ ಆತ್ಮವನ್ನೇ ಕೊಂದರು.
ದೇಶದ ಏಕತೆ, ಅಖಂಡತೆ, ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ಅಂಬೇಡ್ಕರ್ ಅಪ್ಪಟ ದೇಶಪ್ರೇಮಿಯಾಗಿದ್ದರು. ಸ್ವಾರ್ಥ, ಅಧಿಕಾರಕ್ಕಾಗಿ ಸಂವಿಧಾನಕ್ಕೆ 79 ಬಾರಿ ಕಾಂಗ್ರೆಸ್ ತಿದ್ದುಪಡಿ ಮಾಡಿದೆ. ಈಗ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಾ ಸಂವಿಧಾನದ ರಕ್ಷಕರು ನಾವೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಡಾ.ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಸಮಾನತೆ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹತ್ತು-ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಡಾ.ಅಂಬೇಡ್ಕರ್ ಶ್ರೇಷ್ಠತೆ, ಕೊಡುಗೆಯನ್ನು ಮುಂದಿನ ಪೀಳಿಗೆಗೂ ಕಟ್ಟಿಕೊಡುವ ಕೆಲಸಗಳನ್ನು ಮಾಡಿದ್ದಾರೆ ಎಂದು ಡಾ.ಅರ್ಜುನ್ ರಾಮ್ ಮೇಘ್ವಾಲ್ ಹೇಳಿದರು.
ಅಧ್ಯಕ್ಷತೆವಹಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ದೇಶದ ಆಂತರಿಕ ಭದ್ರತೆಗೆ ನಗರ ನಕ್ಸಲರು ಅಪಾಯಕಾರಿಯಾಗಿದ್ದರೆ, ಇಂತಹವರಿಗೆ ಪ್ರಾಯೋಜಕತ್ವ ನೀಡುತ್ತಿರುವ ಕಾಂಗ್ರೆಸ್ ಗೋಮುಖ ವ್ಯಾಘ್ರ ಎಂದು ಕಿಡಿಕಾರಿದರು.
ಡಾ.ಅಂಬೇಡ್ಕರ್‌ಗೆ ದ್ರೋಹ ಎಸಗಿ, ಸ್ವಹಿತಾಸಕ್ತಿ ಬೇಳೆ ಬೇಯಿಸಿಕೊಳ್ಳಲು ಸಂವಿಧಾನಕ್ಕೆ 79 ಬಾರಿ ತಿದ್ದುಪಡಿ ತಂದವರು, ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಡಾ.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ದಾಖಲೆಗಳ ಸಹಿತ ಬಿಡುಗಡೆಯಾದ ಪುಸ್ತಕದಲ್ಲಿ ವಿವರಿಸಲಾಗಿದೆ. ಪುಸ್ತಕದಲ್ಲಿನ ಸಾರಾಂಶವನ್ನು ಜನರಿಗೆ ತಿಳಿಸಿ, ಕಾಂಗ್ರೆಸ್‌ನ ನಿಜಬಣ್ಣ ಬಯಲುಗೊಳಿಸಬೇಕಾಗಿದೆ ಎಂದು ಆರ್.ಅಶೋಕ್ ಸಲಹೆ ನೀಡಿದರು.
ಮಾಜಿ ಸಚಿವ ಎನ್.ಮಹೇಶ್, ಲೇಖಕ ವಿಕಾಸ್ ಕುಮಾರ್ ಪುತ್ತೂರು, ಅಯೋಧ್ಯಾ ಪಬ್ಲಿಕೇಷನ್ಸ್ ನ ನಿರ್ದೇಶಕ ರೋಹಿತ್ ಚಕ್ರತೀರ್ಥ ಚಕ್ರತೀರ್ಥ ಮಾತನಾಡಿದರು.