ಅರ್ಹರಿಗಷ್ಟೇ ಅಂತ್ಯೋದಯ: ಮಧ್ಯವರ್ತಿಗಳ ಹಾವಳಿಗೆ ಕಡಿವಾಣ; ಯೋಜನೆ ದುರುಪಯೋಗಕ್ಕೆ ತಡೆ

Anthyodaya
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಶೋಷಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಕಾದಿಟ್ಟ ಹಣದ ಸಮರ್ಪಕ ಬಳಕೆ ಹಾಗೂ ಸದ್ವಿನಿಯೋಗಕ್ಕಾಗಿ ‘ಅಂತ್ಯೋದಯ’ವೆಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಆದರೆ, ವಿವಿಧ ಯೋಜನೆಗಳ ಫಲ ಹಂಚಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಒಬ್ಬರೇ ಹಲವು ಯೋಜನೆಗಳ ಫಲಾನುಭವಿಗಳಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇವರ ಹಿಡಿತ ತಪ್ಪಿಸಿ, ನೇರವಾಗಿ ನೈಜ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುವಂತೆ ನೆರವಾಗಲು ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ನೋಡಲ್ ಏಜೆನ್ಸಿಯಾಗಿ ಪರಿಶಿಷ್ಟ ವರ್ಗಗಳು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಜಾರಿಗೊಳಿಸುತ್ತಿದೆ.

ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ: ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಗೆ 18 ಸಾವಿರ ಕೋಟಿ ರೂ., ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ 10 ಸಾವಿರ ಕೋಟಿ ರೂ. ಅನುದಾನ ಈ ವರ್ಷ ಮೀಸಲಿಡಲಾಗಿದೆ. ಜತೆಗೆ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಗಳಿಗೆ ಪ್ರತ್ಯೇಕ ಅನುದಾನ ನಿಗದಿಯಾಗಿದೆ. ಇಲಾಖೆಗಳಡಿ ವಿವಿಧ ನಿಗಮಗಳು ಜಾರಿಗೊಳಿಸಿರುವ ಸ್ವಾವಲಂಬಿ, ಸಮೃದ್ಧಿ, ನೇರ ಸಾಲ ಇತ್ಯಾದಿ ಕಾರ್ಯಕ್ರಮಗಳಿಗೆ ಸಲ್ಲಿಸುವ ಅರ್ಜಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಇದು ಯೋಜನೆಯ ದುರ್ಬಳಕೆಯನ್ನು ತಡೆಯಲಿದೆ.

ಅಮಾಯಕತೆ, ಅರಿವಿನ ಕೊರತೆ, ಪರಿಸ್ಥಿತಿ ದುರ್ಲಾಭ ಪಡೆಯುವ ದಲ್ಲಾಳಿಗಳು ಅವರ ಪರವಾಗಿ ನೂರಾರು ಅರ್ಜಿಗಳೊಂದಿಗೆ ವಿಧಾನಸೌಧ, ರಾಜ್ಯ, ಜಿಲ್ಲಾಮಟ್ಟದ ಕಚೇರಿಗೆ ಠಳಾಯಿಸುವುದಕ್ಕೂ ಲಗಾಮು ಹಾಕಲಾಗಿದೆ. ಅಪೇಕ್ಷಿತ, ಅರ್ಹ ಫಲಾನುಭವಿಗಳು ‘ಗ್ರಾಮ ಒನ್’ ಅಥವಾ ಆಯಾ ಗ್ರಾಮ ಪಂಚಾಯಿತಿಗೆ ನೇರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ದಲಿತರ ಹೆಸರಿನಲ್ಲಿ ಕೆಲವು ಶಕ್ತಿಗಳು ಒಡ್ಡುವ ಅಡೆತಡೆ ಹೋಗಲಾಡಿಸಲು ಅಧಿಕಾರಿಗಳಿಗೆ ತರಬೇತಿ ನೀಡಿ, ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕಾರ್ಯಾಗಾರ: ಇಲಾಖೆಯನ್ನು ಮಧ್ಯವರ್ತಿಗಳ ಕಬಂಧಬಾಹುಗಳಿಂದ ಮುಕ್ತಗೊಳಿಸುವುದಕ್ಕಾಗಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜಿಲ್ಲಾಮಟ್ಟದ ‘ಅಂತ್ಯೋದಯ’ ಕಾರ್ಯಾಗಾರ ಸಂಘಟಿಸುತ್ತಿದ್ದು, ದಕ್ಷಿಣಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಸೇರಿ ಒಂಬತ್ತು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. ಗ್ರಾಮ ಪಂಚಾಯಿತಿ, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಐದರಿಂದ 6 ಸಾವಿರ ಸದಸ್ಯರಿಗೆ ಕಾರ್ಯಾಗಾರ ಆಯೋಜಿಸಿ ಅಂತ್ಯೋದಯದ ಆಶಯ ತಿಳಿಸಲಾಗುತ್ತಿದ್ದು, ಪ್ರಾಮಾಣಿಕ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರ ಬಯಸಲಾಗಿದೆ. ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಫೆಬ್ರವರಿ ಅಂತ್ಯದೊಳಗೆ ಕಾರ್ಯಾಗಾರ ಪೂರ್ಣಗೊಳಿಸುವ ಉದ್ದೇಶವಿದ್ದು, ಕಾರ್ಯಾಗಾರಕ್ಕೆ ತಗಲುವ ತಲಾ 20-25 ಲಕ್ಷ ಸಂಬಂಧಿಸಿದ ಇಲಾಖೆಗಳಿಂದ ಪಡೆದು ಸಮಾಜ ಕಲ್ಯಾಣ ಇಲಾಖೆ ಭರಿಸುತ್ತಿದೆ.

ಸಿಸಿ ರೋಡ್ ಬದಲು ಹಾಸ್ಟೆಲ್, ವಸತಿ ಶಾಲೆಗಳಿಗೆ ಹಣ: ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ಪ್ರಸಕ್ತ ವರ್ಷ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನೇ ಕೈಬಿಡಲಾಗಿದೆ. ಶೋಷಿತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲೆಂದು ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ನಿರ್ವಣಕ್ಕೆ ಆದ್ಯತೆ ನೀಡಲಾಗಿದೆ. ತಲಾ ಐದರಿಂದ ಆರು ಕೋಟಿ ರೂ. ವೆಚ್ಚದಲ್ಲಿ ಒಟ್ಟು 100 ಡಾ.ಬಿ. ಆರ್.ಅಂಬೇಡ್ಕರ್ ಹಾಸ್ಟೆಲ್ ಮತ್ತು ತಲಾ 25 ಕೋಟಿ ರೂ. ವೆಚ್ಚದ 10 ವಸತಿ ಶಾಲೆಗಳನ್ನು ನಿರ್ವಿುಸಲು ಇಲಾಖೆ ನಿರ್ಧರಿಸಿದೆ. ಸಿ.ಸಿ. ರೋಡ್​ಗೆ ಮೀಸಲಿಟ್ಟ ಒಟ್ಟು 850 ಕೋಟಿ ರೂ. ಅನುದಾನವನ್ನು ಅಗತ್ಯ, ಅನಿವಾರ್ಯ ಮತ್ತು ಕೊರತೆಯಿರುವೆಡೆ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ನಿರ್ವಿುಸಲು ವಿನಿಯೋಗಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ನೈಜವಾಗಿ ಜನರ ಕಲ್ಯಾಣ ಬಯಸಿ ಇಲಾಖೆ ಪಾರದರ್ಶಕತೆಗೆ ಒತ್ತು ನೀಡಿ ಕೈಗೊಂಡ ಉಪಕ್ರಮಗಳು ಮುಖ್ಯಮಂತ್ರಿಗೆ ತೃಪ್ತಿ ತಂದಿವೆ. ಪರಿಶಿಷ್ಟ ಜಾತಿ, ಪಂಗಡಗಳ ಶಾಸಕರು ಹಾಗೂ ಸಮುದಾಯಗಳ ಹಿತಚಿಂತಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. | ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

ಗಂಗಾ ಕಲ್ಯಾಣಕ್ಕೆ ಸರ್ಜರಿ: ಗಂಗಾ ಕಲ್ಯಾಣ ಯೋಜನೆ ಕರ್ಮಕಾಂಡ ಹೊರಬಿದ್ದ ನಂತರ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಎಚ್ಚೆತ್ತು, ಫಲಾನುಭವಿ ರೈತರ ಖಾತೆಗೆ ಹಣ ಜಮಾ ಮಾಡುತ್ತಿವೆ. 30-35 ಅರ್ಹ ಗುತ್ತಿಗೆದಾರರ ಪಟ್ಟಿ ಸಿದ್ಧಪಡಿಸಿ, ರಾಜ್ಯ ಹಾಗೂ ಆಯಾ ಜಿಲ್ಲಾ ಕಚೇರಿಗಳಲ್ಲಿ ಪ್ರಕಟಿಸಿದೆ. ರೈತ ತನಗೆ ಇಷ್ಟವಾದ ಗುತ್ತಿಗೆದಾರನಿಗೆ ಕೆಲಸ ಒಪ್ಪಿಸಬಹುದು. ಕೊರೆದ ಕೊಳವೆ ಬಾವಿಯಲ್ಲಿ ನೀರು ಬಂದರೆ ಮಾತ್ರ ವೆಚ್ಚ ಪಾವತಿಗೆ ಫಲಾನುಭವಿ ಒಪ್ಪಿಗೆ ಪಡೆಯಲಿದ್ದು, ಇಲ್ಲದಿದ್ದರೆ ಈ ಹಣ ಸರ್ಕಾರಕ್ಕೆ ವಾಪಸ್ ಹೋಗಲಿದ್ದು, ರೈತ ಕೂಡ ನಗದು ಡ್ರಾ ಮಾಡಿಕೊಳ್ಳಲಾಗದು. ನೀರು ಲಭಿಸಿದ ಕೊಳವೆ ಬಾವಿಗೆ ಮೋಟಾರ್ ಅಳವಡಿಸಿದ ರೈತನಿಗೆ ಮತ್ತೊಂದು ಕಂತಿನ ಹಣ ಜಮಾ ಮಾಡಲಿದ್ದು, ಸರ್ಕಾರವೇ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿ ನೇರ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗೆ ಹಣ ಪಾವತಿಸಲಿದೆ.

ಗಮನಾರ್ಹ ಉಪಕ್ರಮಗಳು

  • ಹಾಸ್ಟೆಲ್​ಗಳಿಗೆ ಆಹಾರಧಾನ್ಯ ಪೂರೈಕೆಯಲ್ಲಿ ಟೆಂಡರ್ ಗುತ್ತಿಗೆ ಗೋಲ್‍ಮಾಲ್ ಪತ್ತೆಯಾಗಿ ಐದಾರು ಅಧಿಕಾರಿಗಳ ತಲೆದಂಡವಾದ ಬಳಿಕ ದಕ್ಷತೆ, ಪಾರದರ್ಶಕತೆ ಕಾಯ್ದುಕೊಳ್ಳಲು ಟೆಂಡರ್ ನಿಯಮಗಳನ್ನು ಪರಿಷ್ಕರಿಸಿ, ಆನ್​ಲೈನ್​ಗೆ ಒಳಪಡಿಸಲಾಗಿದೆ.
  • ವಾರ್ಡನ್, ಅಧಿಕಾರಿಗಳ ಹಂತದಲ್ಲಿ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ. ಪ್ರತಿಯೊಂದು ಆಹಾರ, ಸಾಂಬಾರ ಪದಾರ್ಥಗಳಿಗೆ ಪ್ರತ್ಯೇಕ ಟೆಂಡರ್, ಪೂರೈಕೆ ಗುತ್ತಿಗೆ, ಬಿಲ್ ಸಲ್ಲಿಕೆ ಹಾಗೂ ಹಣ ಪಾವತಿ ಪ್ರಕ್ರಿಯೆ ಪೂರ್ಣ ಆನ್​ಲೈನ್​ನಲ್ಲಿ ನಿರ್ವಹಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net