

ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (ಎಎನ್ ಟಿಎಫ್) ಸೃಜನೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಮಾದಕ ದ್ರವ್ಯ ಸಂಬಂಧ ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ಎಎನ್ ಟಿಎಫ್ ಘಟಕಕ್ಕೆ ನೀಡಲಾಗಿದೆ.
ಎಎನ್‌ಟಿಎ್ ಘಟಕದ ಮುಖ್ಯಸ್ಥರಾಗಿ ಡಿಜಿಪಿ ಅಥವಾ ಎಡಿಜಿಪಿ ದರ್ಜೆ ಅಧಿಕಾರಿ ಹೊಣೆ ನಿಭಾಯಿಸಲಿದ್ದಾರೆ. ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಘಟಕದಿಂದ ಇಬ್ಬರು ಎಎಸ್‌ಪಿ, ಇಬ್ಬರು ಡಿವೈಎಸ್‌ಪಿ ಸೇರಿ 56 ಅಧಿಕಾರಿ, ಸಿಬ್ಬಂದಿಯನ್ನು ಎಎನ್‌ಟಿಎ್ ಘಟಕಕ್ಕೆ ವರ್ಗಾಯಿಸಲು ಸೂಚಿಸಲಾಗಿದೆ. ಡಿಜಿ-ಐಜಿಪಿ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಸೈಬರ್ ಕ್ರೈಂ ಕಮಾಂಡ್ ಘಟಕ ಡಿಜಿಪಿಗೆ ಕಾರ್ಯವರದಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆ ವರ್ಗಾಯಿಸುವ ಜತೆಗೆ ಎಎನ್ ಟಿಎಫ್ ಎಂದು ಪುನರ್ ನಾಮಕರಣ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಲಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.
ಎಎನ್‌ಟಿಎ್ ಘಟಕವನ್ನು 388 ವಿವಿಧ ದರ್ಜೆಯ ಹುದ್ದೆಗಳೊಂದಿಗೆ ಸೃಜಿಸಲು ಆವರ್ತಕ ವೆಚ್ಚ 28.96 ಕೋಟಿ ರೂ. ವೆಚ್ಚವಾಗಲಿದೆ ಎಂದು ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆ ಪರಿಷ್ಕರಿಸಿ ಡಿಜಿಪಿ/ಎಡಿಜಿಪಿ ಅಧೀನದಲ್ಲಿ ಕೇಂದ್ರ ಸ್ಥಾನದಲ್ಲಿ ಎಎನ್‌ಟಿಎ್ ಸ್ಥಾಪನೆಗೆ ಹೊರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಬ್ಬರು ಇನ್‌ಸ್ಪೆಕ್ಟರ್, 4 ಪಿಎಸ್‌ಐ, 20 ಎಚ್‌ಸಿ, 30 ಪಿಸಿ ಸೇರಿದಂತೆ 56 ಅಧಿಕಾರಿ ಸಿಬ್ಬಂದಿಯನ್ನು ನಕ್ಸಲ್ ನಿಗ್ರಹ ಪಡೆಯಿಂದ ಎಎನ್‌ಟಿಎ್ಗೆ ಸ್ಥಳಾಂತರಿಸುವಂತೆ ಕೋರಲಾಗಿತ್ತು.
ಈಗಾಗಲೇ ಸೈಬರ್ ಅಪರಾಧ ತಡೆ ಘಟಕ ಸ್ಥಾಪಿಸಿ 43 ಸಿಇಎನ್ ಠಾಣೆಗಳನ್ನು ಅದರಡಿ ತರಲಾಗಿತ್ತು. ಜತೆಗೆ ಸೈಬರ್, ಆರ್ಥಿಕ, ನಾರ್ಕೋಟಿಕ್ ಪೊಲೀಸ್ ಠಾಣೆ ಬದಲಿಗೆ ಸೈಬರ್ ಅಪರಾಧ ಪೊಲೀಸ್ ಎಂದು ಮರು ನಾಮಕರಣ ಮಾಡಲಾಯಿತು. ಉಳಿದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧಗಳನ್ನು ಸಿಇಎನ್‌ನಲ್ಲಿ ಬೇರ್ಪಡಿಸಿ ಸಿವಿಲ್ ಠಾಣೆಯಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಿದೆ.
ತಜ್ಞರ ಹೊರಗುತ್ತಿಗೆ ನೇಮಕ
ಹೊರಗುತ್ತಿಗೆ ಆಧಾರದಲ್ಲಿ ಐದು ೆರೆನ್ಸಿಕ್/ಕಾನೂನು ತಜ್ಞರ ಹುದ್ದೆ, ಇಬ್ಬರು ೆರೆನ್ಸಿಕ್ ಲೆಕ್ಕಪರಿಶೋಧಕರು ಮತ್ತು ಮೂವರು ಕಂಪ್ಯೂಟರ್/ಡೇಟಾ ವಿಶ್ಲೇಷಕರ ನೇಮಕ ಮಾಡುವಂತೆ ಡಿಜಿಪಿ ಡಾ.ಎಂ.ಎ. ಸಲೀಂ, ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಕಾರ್ಯನಿರ್ವಹಣೆ ಹೇಗೆ?
1. ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಡ್ರಗ್ಸ್ ಕೇಸ್‌ಗಳ ಮೇಲ್ವಿಚಾರಣೆ
2. ಡ್ರಗ್ಸ್ ಕುರಿತಾಗಿಯೇ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುವ ತಂಡ
3. ಡ್ರಗ್ಸ್ ಮೂಲ ಪತ್ತೆಯೇ ಉದ್ದೇಶ- ಗುರಿ, ಪೂರ್ಣ ಶಕ್ತಿ ವಿನಿಯೋಗ
4. ಡ್ರಗ್ಸ್ ದಂಧೆ ಪತ್ತೆ ವಿಚಾರದಲ್ಲಿ ತಜ್ಞತೆ, ಪರಿಣಿತಿ ಸೃಷ್ಟಿ ಮತ್ತು ಬಳಕೆ
ರಾಜ್ಯದಲ್ಲಿ ಸಂಪೂರ್ಣವಾಗಿ ಡ್ರಗ್ಸ್ ಚಟುವಟಿಕೆ ಮಟ್ಟ ಹಾಕಲು ಸಮರ ಸಾರಿದ್ದೇವೆ. ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆ ಮಾಡಲಾಗಿದೆ. ಇದಕ್ಕೆ ಅಗತ್ಯವಾದ ಅಧಿಕಾರಿಗಳನ್ನು ನೇಮಕ ಮಾಡಿ, ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದೇವೆ.
-ಡಾ. ಜಿ.ಪರಮೇಶ್ವರ, ಗೃಹ ಸಚಿವರು