

ಮಾದಕ ವ್ಯಸನಮುಕ್ತ ಜಗತ್ತನ್ನು ರೂಪಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತದೆ. ಮಾದಕ ವಸ್ತುಗಳ ಪೂರೈಕೆ ಪ್ರಮಾಣ ಹಾಗೂ ವ್ಯಸನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಡ್ರಗ್ಸ್ ಜಾಲಗಳ ನಿಯಂತ್ರಣಕ್ಕೆ ಹೊಸ ಯೋಜನೆಗಳೇನು? ಈವರೆಗೆ ಎಷ್ಟು ಪ್ರಕರಣ ಪತ್ತೆಯಾಗಿವೆ? ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆ ಹೇಗಿದೆ? ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಕೈಗೊಂಡಿರುವ ಕ್ರಮಗಳೇನು? ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ವಿಜಯವಾಣಿಗೆ ನೀಡಿರುವ ಸಂದರ್ಶನದಲ್ಲಿ ಸವಿಸ್ತಾರವಾಗಿ ಮಾತನಾಡಿದ್ದಾರೆ.
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
*ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವ ಹೊಸ ಯೋಜನೆಗಳೇನು?
- ಯುವ ಸಮೂಹದ ಭವಿಷ್ಯವನ್ನು ಹಾಳು ಮಾಡುತ್ತಿರುವ ಮಾದಕ ದ್ರವ್ಯ ಜಾಲಗಳನ್ನು ಮಟ್ಟ ಹಾಕಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾದರಿ ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಸ್ಥಾಪಿಸಲಾಗುತ್ತಿದೆ.
* ಎಎನ್‌ಟಿಎ್ ಯಾವ ರೀತಿ ಕಾರ್ಯ ನಿರ್ವಹಿಸಲಿದೆ? ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನೇಮಕಾತಿ ಹೇಗಿರಲಿದೆ?
- ತೆಲಂಗಾಣ ಮಾದರಿಯಲ್ಲಿ ಎಎನ್‌ಟಿಎ್ ವಿಶೇಷ ಘಟಕ ಸ್ಥಾಪಿಸಲಾಗುವುದು. ಇದಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದರ್ಜೆ ಅಧಿಕಾರಿ ನೇತೃತ್ವ ವಹಿಸಲಿದ್ದು, ಮಾದಕ ದ್ರವ್ಯಗಳ ಮಾರಾಟ ಮತ್ತು ಬಳಕೆ ತಡೆಯಲು ಕಾರ್ಯಾಚರಣೆ ನಡೆಸಲಿದೆ. ವಲಯವಾರು ಘಟಕ ತೆರೆದು ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳ ಪ್ರತ್ಯೇಕ ತಂಡವನ್ನು ನೇಮಕ ಮಾಡಲಾಗುತ್ತದೆ. ಡಾರ್ಕ್ ವೆಬ್‌ಸೈಟ್‌ನಲ್ಲಿ ಡ್ರಗ್ಸ್ ವ್ಯವಹಾರ ಮತ್ತು ರಾಜ್ಯಕ್ಕೆ ಮಾದಕ ದ್ರವ್ಯಗಳ ಪ್ರವೇಶದ ಮೇಲೂ ಇದು ನಿಗಾ ಇಡಲಿದೆ. ಮಾದಕ ವಸ್ತು ಪತ್ತೆ ಹಚ್ಚುವಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆದ ಶ್ವಾನ ದಳವನ್ನು ನಿಯೋಜಿಸುವ ಬಗ್ಗೆಯೂ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.
* ರಾಜ್ಯದಲ್ಲಿ ಈವರೆಗೆ ಎಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ? ಪೆಡ್ಲರ್‌ಗಳ ಬಂಧನ ಹಾಗೂ ಜಪ್ತಿಯಾದ ಡ್ರಗ್ಸ್‌ನ ಪ್ರಮಾಣ ಎಷ್ಟು?
- 2024ರಲ್ಲಿ 4188 ಪ್ರಕರಣ ದಾಖಲಿಸಿ 2243 ಪೆಡ್ಲರ್‌ಗಳನ್ನು ಬಂಧಿಸಿ 165 ಕೋಟಿ ರೂ. ಮೌಲ್ಯದ 5743 ಕೆಜಿ ಗಾಂಜಾ, 289 ಕೆಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. 2025ರ ಮೇವರೆಗೆ 1794 ಎನ್‌ಡಿಪಿಎಸ್ ಕೇಸ್ ದಾಖಲಿಸಿ 806 ಪೆಡ್ಲರ್‌ಗಳನ್ನು ಬಂಧಿಸಿ, 119 ಕೋಟಿ ರೂ. ಮೌಲ್ಯದ 2,582 ಕೆಜಿ ಗಾಂಜಾ ಮತ್ತು 330 ಕೆಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ.
* ಡ್ರಗ್ಸ್ ಮಾಫಿಯಾದಲ್ಲಿ ವಿದೇಶಿ ಪ್ರಜೆಗಳು ಮತ್ತು ಹೊರ ರಾಜ್ಯದವರೇ ಹೆಚ್ಚು ಭಾಗಿಯಾಗಿದ್ದಾರೆ. ವಿದೇಶಿಗರ ಬಂಧನ, ಗಡಿಪಾರು ವಿಚಾರದಲ್ಲಿ ಏನೆಲ್ಲ ಕ್ರಮವಾಗಿದೆ?
- ಕಳೆದ 4 ವರ್ಷಗಳಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ 295 ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಈ ಪೈಕಿ ಐವರು ಪೆಡ್ಲರ್‌ಗಳು ಮತ್ತು 33 ವ್ಯಸನಿಗಳನ್ನು ಡಿಟೆನ್ಶನ್ ಸೆಂಟರ್‌ಗೆ ಕಳುಹಿಸಿ ಆಯಾ ದೇಶಗಳಿಗೆ ಮಾಹಿತಿ ರವಾನಿಸಿ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.
* ರೈಲು, ಬಸ್ಸು, ಇತರ ವಾಹನಗಳಲ್ಲಿ ಸಾಗಾಟವಾಗುತ್ತಿದ್ದ ಮಾದಕ ದ್ರವ್ಯ, ಈಗ ಡಾರ್ಕ್ ವೆಬ್‌ಸೈಟ್‌ನಲ್ಲಿ ಬಕ್ಕಿಂಗ್ ಆಗಿ ಬಿಟ್‌ಕಾಯಿನ್‌ನಲ್ಲಿ ಹಣ ಸಂದಾಯವಾಗಿ, ಕೊರಿಯರ್‌ನಲ್ಲಿ ಪೂರೈಕೆ ಆಗುತ್ತಿದೆ. ಇದರ ಮೇಲೆ ನಿಗಾ ಹೇಗೆ ?
- ಡ್ರಗ್ಸ್ ದಂಧೆ ಮೇಲೆ ನಿಗಾ ವಹಿಸಲು ಮತ್ತು ಕಾರ್ಯಾಚರಣೆ ನಡೆಸಲು ಸಿಐಡಿಯಲ್ಲಿ ಮಾದಕ ವಸ್ತು ಮತ್ತು ಸಂಘಟಿತ ಅಪರಾಧ ವಿಭಾಗ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಜತೆಗೆ ಕಮಿಷನರೇಟ್‌ನಲ್ಲಿ ಇರುವ ಸಿಸಿಬಿ ವಿಭಾಗ ಮತ್ತು ಠಾಣಾ ಮಟ್ಟದಲ್ಲಿ ಮಾದಕ ದ್ರವ್ಯ ದಂಧೆ ಮೇಲೆ ಸದಾ ಕಾಲ ನಿಗಾ ವಹಿಸಲಿವೆ. ಡಾರ್ಕ್ ವೆಬ್‌ಸೈಟ್ ಮತ್ತು ಕೊರಿಯರ್‌ನಲ್ಲಿ ಡ್ರಗ್ಸ್ ದಂಧೆ ಅಂತಹ ಸಾಕಷ್ಟು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೈಲಿಗೂ ಕಳುಹಿಸಿದ್ದಾರೆ.
* ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ನಾರ್ಕೋಟಿಕ್ಸ್ ತನಿಖೆ ಸಲುವಾಗಿ ರಾಜ್ಯದ ಎಲ್ಲೆಡೆ ಸಿಇಎನ್ ಠಾಣೆ ತೆರೆಯಲಾಗಿದೆ. ಆದರೆ, ಆ ಠಾಣೆಗಳು ಸೈಬರ್ ಕ್ರೈಂಗಷ್ಟೇ ಸೀಮಿತವಾಗಿವೆ ಯಾಕೆ?
- ಸೈಬರ್ ಅಪರಾಧ ಪ್ರಕರಣಗಳೂ ದೊಡ್ಡ ಸಂಖ್ಯೆಯಲ್ಲಿವೆ ಮತ್ತು ಗಂಭೀರವಾಗಿವೆ. ಜನರನ್ನು ಸೈಬರ್ ಕ್ರೈಂನಿಂದ ರಕ್ಷಿಸಬೇಕಾಗಿದೆ. ಸಿಇಎನ್ ಠಾಣೆ ಅಧಿಕಾರಿಗಳೇ ಡ್ರಗ್ಸ್ ಕೇಸ್ ದಾಖಲು ಮತ್ತು ಪತ್ತೆ ಮಾಡಬೇಕೆಂದಿಲ್ಲ. ಸಾಮಾನ್ಯ ಸಿವಿಲ್ ಠಾಣಾ ಅಧಿಕಾರಿ, ಸಿಬ್ಬಂದಿಗೆ ಹೆಚ್ಚಿನ ಮಾಹಿತಿ ಮತ್ತು ಜ್ಞಾನ ಇರಲಿದೆ. ನಿರಂತರವಾಗಿ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿ ಪೆಡ್ಲರ್‌ಗಳನ್ನು ಸಮರ್ಥವಾಗಿ ಮಟ್ಟ ಹಾಕುತ್ತಿದ್ದಾರೆ.
* ಮಾದಕ ದ್ರವ್ಯ ವಿರುದ್ಧ ಅರಿವು ಮೂಡಿಸಲು ಮತ್ತು ತಡೆಗಟ್ಟಲು ವಿಶೇಷ ಕಾರ್ಯಕ್ರಮಗಳೇನು?
- 2024ರಲ್ಲಿ 3602 ಶಾಲಾ-ಕಾಲೇಜುಗಳಲ್ಲಿ 5.5 ಲಕ್ಷ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಗಿದೆ. ಜನವರಿಯಿಂದ ಏಪ್ರಿಲ್‌ವರೆಗೆ ರಾಜ್ಯವ್ಯಾಪಿ 4,333 ಜಾಗೃತಿ ಅಭಿಯಾನ ನಡೆಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಡ್ರಗ್ಸ್ ಸೇವನೆಯಿಂದ ಏನೆಲ್ಲ ಅಪಾಯವಾಗಲಿದೆ, ತಡೆಗಟ್ಟುವ ಬಗೆ ಹೇಗೆ ಎಂದು ತಿಳಿಸಿಕೊಡಲಾಗಿದೆ. ಇದೇ ವೇಳೆ ಡ್ರಗ್ಸ್ ಫ್ರೀ ಕರ್ನಾಟಕ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಹೆಲ್ಪ್‌ಲೈನ್ 1042 ಸ್ಥಾಪಿಸಲಾಗಿದೆ.
ಎನ್‌ಡಿಪಿಎಸ್ ಪ್ರಕರಣ, ವಿಚಾರಣಾ ಹಂತ ಮತ್ತು ಶಿಕ್ಷೆ ಪ್ರಮಾಣ
------------------------------------------------------------------------
ವರ್ಷ ಪ್ರಕರಣ ವಿಚಾರಣಾ ಹಂತ ಖುಲಾಸೆ ಶಿಕ್ಷೆ ಶೇಕಡ
----------------- --------------------------------------------------------
2021 5,789 3,025 151 2,526 94.35
2022 6,406 3097 153 3,034 95.19
2023 6,767 3,376 105 3,180 96.80
2024 4,188 2,558 21 1,341 98.45
2025 (ಮೇ) 2,168 1,119 1 182 99.45
ಯುವ ಸಮೂಹ ಸಣ್ಣ ಪ್ರಮಾಣದಲ್ಲಿಯೂ ಮಾದಕ ದ್ರವ್ಯ ಸೇವನೆ ಮಾಡಬಾರದು. ಕ್ರಮೇಣ ಅದೇ ದೊಡ್ಡ ವ್ಯಸನವಾಗಿ ಮಾರ್ಪಟ್ಟು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಡ್ರಗ್ಸ್‌ನಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.
- ಡಾ. ಎಂ.ಎ. ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ