ಅಂತರಂಗ; ತಂತ್ರಶಾಸ್ತ್ರ ದರ್ಶನ

Antaranga vvani
Published on
ಮಂತ್ರ: ಒಂದು ಮಂತ್ರ ಫಲಕಾರಿಯಾಗಲು, ಅದನ್ನು ಒಬ್ಬ ಯೋಗ್ಯ ಗುರುವಿನಿಂದ, ಸೂಕ್ತ ವಿಧಿವಿಧಾನಗಳಿಂದ ಪಡೆಯಬೇಕು. ಒಂದು ಮಂತ್ರದ ಶಕ್ತಿಯನ್ನು ಹೆಚ್ಚಿಸಲು ಹಾಗೂ ಅದು ಫಲಕಾರಿಯಾಗಲು ತಂತ್ರಗಳು ಅನೇಕ ವಿಧಾನಗಳನ್ನು ಸೂಚಿಸಿವೆ. ಕೆಲವೊಂದು ಕ್ರಿಯೆಗಳನ್ನು ಸೂಚಿಸಬೇಕಾದರೆ: ಮುಖಶೋಧನ (ಬಾಯಿಶುದ್ಧಿ), ಜಿಹ್ವಾಶೋಧನ (ನಾಲಿಗೆ ಶುದ್ಧಿ), ಅಶೌಚಭಂಗ (ಮಂತ್ರಶುದ್ಧಿ), ನಿದ್ರಾಭಂಗ (ಮಂತ್ರವನ್ನು ನಿದ್ರಾಸ್ಥಿತಿಯಿಂದ ಎಬ್ಬಿಸುವುದು) ಇತ್ಯಾದಿ.

ಇವಲ್ಲದೆ ತಂತ್ರಗಳು ದಶಸಂಸ್ಕಾರಗಳನ್ನೂ - ‘ದೀಪನಿ’ಯಂತಹ ಶುದ್ಧೀಕರಣ ಕ್ರಿಯೆಗಳನ್ನು, ಎಂದರೆ ಆದಿ-ಅಂತ್ಯದಲ್ಲಿ ಓಂಕಾರ(ಪ್ರಣವ)ವನ್ನು ಸೇರಿಸಿದ ಬೀಜಮಂತ್ರವನ್ನು ಏಳು ಬಾರಿ ಪಠಣ ಮಾಡಿ ಶುದ್ಧೀಕರಣಗೊಳ್ಳುವುದನ್ನು, ಯೋಗ್ಯವೆಂದು ಸಲಹೆ ಮಾಡಿವೆ. ಈ ಎಲ್ಲ ಕಾರ್ಯ, ಕ್ರಿಯೆಗಳನ್ನು ಯೋಗ್ಯ ಗುರುವಿನಿಂದ ಕಲಿಯಬೇಕೇ ಹೊರತು ಗ್ರಂಥಗಳನ್ನು ಓದಿ ಅದರ ಪ್ರಯೋಗ ನಡೆಸಬಾರದು. ಶಬ್ದದ ಹಾಗೂ ಅದರ ಮುಂದಿನ ಕ್ರಿಯೆಯಾದ ವಾಕ್ಕಿನ (ಮಾತಿನ), ಸೂಕ್ಷ್ಮ ಅವ್ಯಕ್ತಸ್ಥಿತಿಯಿಂದ, ಪೂರ್ಣ ವ್ಯಕ್ತಸ್ಥಿತಿಯವರೆಗಿನ ವಿಕಾಸವನ್ನು ಕುರಿತು ತಂತ್ರಗಳು ಮಂಡಿಸಿರುವ ವಾದ ಇಲ್ಲಿ ಉಲ್ಲೇಖಾರ್ಹ.

ವ್ಯಕ್ತಿಯೊಬ್ಬ ಮಾತನಾಡಿದಾಗ, ಅದರಲ್ಲಿ ವಾಕ್ಕಿನ (ಮಾತಿನ) ನಾಲ್ಕು ಹಂತದ ಬೆಳವಣಿಗೆ ಇರುತ್ತದೆ. ವಾಕ್ಕು ಮೂಲಾಧಾರ ಚಕ್ರದಲ್ಲಿ ಅವ್ಯಕ್ತ ಶಬ್ದವಾಗಿ ನಿದ್ರಾಸ್ಥಿತಿಯಲ್ಲಿರುತ್ತದೆ. ಇದನ್ನು ‘ಪರಾವಾಕ್’ ಎಂದು ಕರೆಯುತ್ತಾರೆ. ಅದು ಎಚ್ಚರಗೊಳ್ಳಲು ಪ್ರಾರಂಭಿಸಿ ನಾಭಿಪ್ರದೇಶದಲ್ಲಿರುವ ಮಣಿಪೂರ ಚಕ್ರವನ್ನು ತಲುಪಿದಾಗ, ಅಲ್ಲಿ ಆಗತಾನೇ ಪ್ರಾರಂಭವಾದ ಸೂಕ್ಷ್ಮಕಂಪನಗಳನ್ನು ತೋರಿಸುತ್ತದೆ.

ಈ ಸ್ಥಿತಿಯನ್ನು ‘ಪಶ್ಯಂತೀವಾಕ್’ ಎಂದು ಕರೆಯುತ್ತಾರೆ. ಅಲ್ಲಿಂದ ಮುಂದೆ ಹೃದಯಪ್ರದೇಶದಲ್ಲಿ ಅನಾಹತಚಕ್ರದವರೆಗೆ ಅದು ಏರಿದಾಗ, ಈ ಕಂಪನಗಳು ನಿರ್ದಿಷ್ಟ ಹಾಗೂ ಸ್ಪಷ್ಟ ಯೋಚನಾರೂಪವನ್ನು ತಾಳುತ್ತವೆ. ಈ ಸ್ಥಿತಿಯನ್ನು ‘ಮಧ್ಯಮಾವಾಕ್’ ಎಂದು ಕರೆಯುತ್ತಾರೆ. ಅಲ್ಲಿಂದ ಕಂಠಪ್ರದೇಶಕ್ಕೆ ಬಂದಾಗ ಕಂಪನಗಳು ಪೂರ್ಣ, ಸ್ಪಷ್ಟ ವಾಕ್ ರೂಪದಲ್ಲಿ, ಮಾತಿನ ರೂಪದಲ್ಲಿ, ಹೊರಬೀಳುತ್ತವೆ. ಈ ಸ್ಥಿತಿಯನ್ನು ‘ವೈಖರೀವಾಕ್’ ಎಂದು ಕರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net