ಅಂತರಂಗ: ಸುಖ-ದುಃಖ

Meditation vvani
Published on
 ಸುಖಸ್ಯ ದುಃಖಸ್ಯ ನ ಕೋಪಿ ದಾತಾ

ಪರೋ ದದಾತೀತಿ ಕುಬುದ್ಧಿರೇಷಾ

ಅಹಂ ಕರೋಮೀತಿ ವೃಥಾಭಿಮಾನಃ

ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ

ಸುಖವನ್ನಾಗಲೀ ದುಃಖವನ್ನಾಗಲಿ ಯಾರೂ ಕೊಡುವುದಿಲ್ಲ. ಇತರರು ಕೊಡುತ್ತಾರೆ ಎನ್ನುವುದು ತಪ್ಪುಗ್ರಹಿಕೆ. ನಾನೇ ಮಾಡುತ್ತೇನೆ ಎಂಬುದು ಅಹಂಕಾರವಷ್ಟೆ. ಇಡೀ ಲೋಕವು ತಾನು ಮಾಡಿರುವ ಕರ್ಮದಿಂದ ಬದ್ಧವಾಗಿದೆ. ನಾವು ಮಾಡಿದ ಕರ್ಮಕ್ಕೆ ತಕ್ಕಂತೆ ನಮಗೆ ಫಲಗಳು ದೊರೆಯುತ್ತವೆ.

ಇತರರನ್ನು ಹಳಿದು ಪ್ರಯೋಜನವಿಲ್ಲ ಎಂದು ಹೇಳುವ ಈ ಸುಭಾಷಿತವು ನಮಗೆ ಜೀವನದ ಯಥಾರ್ಥತೆಯನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ನಾವು ಸಂತೋಷವಾಗಿದ್ದಾಗ, ಯಶಸ್ಸನ್ನು ಕಂಡಾಗ ಅದಕ್ಕೆ ನಾವು ಕಾರಣ ಎಂದು ಬೀಗುತ್ತೇವೆ. ದುಃಖ ಉಂಟಾದಾಗ, ನಷ್ಟ ಬಂದಾಗ ಇತರರನ್ನು, ದೇವರನ್ನು, ವಿಧಿಯನ್ನು ಹಳಿಯುತ್ತೇವೆ. ಆದರೆ ವಾಸ್ತವಿಕವಾಗಿ ನಮ್ಮ ಲಾಭ-ನಷ್ಟಗಳಿಗೆ, ಸುಖ-ದುಃಖಗಳಿಗೆ ನಾವೇ ಕಾರಣ ಹೊರತು ಇತರರಲ್ಲ. ಇತರರು ನೆಪ ಮಾತ್ರ. ಏಕೆಂದರೆ ಒಂದೇ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಅವರ ವ್ಯಕ್ತಿತ್ವ. ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಮ್ಮ ಪ್ರತಿಕ್ರಿಯೆಗಳು. ಈ ವ್ಯಕ್ತಿತ್ವವು ನಾವು ಮಾಡುವ ಕರ್ಮಗಳಿಂದ ರೂಪುಗೊಳ್ಳುತ್ತದೆ.

ನಮ್ಮ ಕರ್ಮಫಲಗಳಿಗೆ ತಕ್ಕಂತೆ ಆಗುಹೋಗುಗಳು ಉಂಟಾಗುತ್ತವೆ. ಕರ್ಮಗಳು ನಮ್ಮ ಆಲೋಚನೆ ಮತ್ತು ಆಸೆಗಳಿಂದ ಪ್ರಚೋದಿತವಾಗಿವೆ. ಆದ್ದರಿಂದ ನಾವು ಮಾಡುವ ಆಲೋಚನೆ ಮತ್ತು ಕರ್ಮಗಳ ಬಗ್ಗೆ ಗಮನ ಹರಿಸಬೇಕು. ಇಂದಿನ ನಮ್ಮ ಸ್ಥಿತಿಗೆ, ನಮ್ಮ ಹಿಂದಿನ ಕರ್ಮಗಳೇ ಕಾರಣ. ಈಗ ನಾವು ಮಾಡುವ ಕರ್ಮಗಳು ನಮ್ಮ ಮುಂದಿನ ಜೀವನಕ್ಕೆ ಕಾರಣವಾಗುತ್ತವೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನಾವು ಸರಿಯಾದ ಕೆಲಸಗಳನ್ನು ಮಾಡಿದಾಗ, ಕುಶಲತೆಯಿಂದ ಕಾರ್ಯ ನಿರ್ವಹಿಸಿದಾಗ, ನಮಗೆ ಯಶಸ್ಸು ದೊರೆತೇ ದೊರೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net