

ಕ್ರೋಧರಾಹಿತ್ಯ: ಕೋಪ ಅಂಟದ ತಪಸ್ಸು ಫಲಕಾರಿಯಾಗುತ್ತದೆ. ಕ್ರೋಧ ತನ್ನ ವೈರಿ. ಆ ಕ್ರೋಧದ ಇನ್ನೊಂದು ಮುಖವೇ ದ್ವೇಷ. ಕ್ರೋಧದ ಪರಿಣಾಮವೇ ಮಹಾಭಾರತ-ರಾಮಾಯಣ. ಗುರುವಿನಲ್ಲಿ ಪ್ರೀತಿ ವಾತ್ಸಲ್ಯಗಳು ಇದ್ದರೆ ಮಾತ್ರ ಗುರು-ಶಿಷ್ಯರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇಲ್ಲದಿದ್ದರೆ ಆ ಸಂಬಂಧ ವ್ಯಾವಹಾರಿಕವಾಗಿ ಮಾತ್ರ ಸೀಮಿತವಾಗುತ್ತದೆ.
ಸದಾಚಾರಯೋಗ್ಯ: ಆಚಾರ-ವಿಚಾರದ ಕೊಂಡಿ ಕಳಚಬಾರದು. ಮಾತು ಬ್ರಹ್ಮ-ಮನ ಭ್ರಮೆಯಿಂದ ತುಂಬಿದ್ದರೆ ಏನು ಪ್ರಯೋಜನ? ಪುಣ್ಯಕ್ಷೇತ್ರದಲ್ಲಿದ್ದು ದುಷ್ಟ ವಿಚಾರಕ್ಕೆ ಕೈಹಾಕಿ ಅಧ್ಯಾತ್ಮಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವವರನ್ನು ನೋಡಿದರೆ ಮನಸ್ಸು ಜುಗುಪ್ಸೆಗೆ ಒಳಗಾಗುತ್ತದೆ. ಸಹೃದಯಿ: ಇನ್ನೊಬ್ಬರು ತೊಂದರೆಯಲ್ಲಿದ್ದಾಗ ಸಹಾಯ ಮಾಡಬೇಕು. ಆದರೆ ಅದಕ್ಕೆ ಪ್ರತಿಫಲ ಬಯಸದೆ ಇರುವುದೇ ಸಹೃದಯಿಯ ಲಕ್ಷಣ. ಉಪಕಾರ ಶಬ್ದವೇ ಗೊತ್ತಿಲ್ಲದವರು ಸ್ವಜನರ ಮನೆ ತುಂಬುತ್ತಾರೆ. ಅವರು ಸಮಾಜಮುಖಿಯಾಗಿ ಸಮಾಜದ ಮೇಲೆ ಬೆಳಕು ಚೆಲ್ಲಬೇಕು. ಅಸಹಾಯಕರ ನೋವಿಗೆ ಸ್ಪಂದಿಸಬೇಕು.
ತತ್ತ್ವದರ್ಶಿ: ಗುರು ತತ್ತಾ್ವನುಭವಿಯಾಗಿರಬೇಕು. ಚಿತ್ರದ ಹುಲಿ, ಶಿಲೆಯ ಸಿಂಹ, ಪರಿಮಳವಿಲ್ಲದ ಪುಷ್ಪ, ರಸವಿಲ್ಲದ ಹಣ್ಣು, ವಿದ್ಯೆಯಿಲ್ಲದ ಗುರು ಇವೆಲ್ಲ ವ್ಯರ್ಥ. ಶಿಷ್ಯರ-ಭಕ್ತರ ಸಂದೇಹಗಳನ್ನು ದೂರ ಮಾಡಿ ತತ್ತ್ವವನ್ನು ಉಪದೇಶಿಸುವ ಗುರು ಬೇಕು. ಈ ಐದು ಲಕ್ಷಣಗಳಿರುವವನೇ ನಿಜವಾದ ಗುರು.