

ಮಗಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದರು. ಮನೆ ತುಂಬ ಆಟದ ಸಾಮಾನು. ಯಾವುದಾದರೂ ವಸ್ತುಗಳನ್ನು ಕೇಳುವುದಕ್ಕೆ ಮುಂಚೆಯೇ ಅವಳ ಮುಂದೆ ಇರುತ್ತಿದ್ದವು. ವಾರ, ಎರಡು ವಾರಕ್ಕೊಮ್ಮೆ ತಂದೆ-ತಾಯಿ ಮಗಳ ಜತೆ ಕಾಲ ಕಳೆಯುತ್ತಿದ್ದರು.
ಪ್ರತಿ ದಿವಸ ಶಾಲೆಗೆ ಹೋಗಿ ಬರುತ್ತಿದ್ದಳು ಅನನ್ಯ. ಅಂದು ರಜಾದಿವಸ. ಅನನ್ಯ ಪರಿಚಾರಕಿಯ ಜೊತೆ ಆಟವಾಡುತ್ತಿದ್ದಾಳೆ. ತಾಯಿ ಮಲಗುವ ಕೋಣೆಯಿಂದ ಹೊರಬರಲು ಮಗಳಿಗೆ ತಿಳಿಸಿದಳು. ಆ ಕೋಣೆಗೆ ಬೀಗ ಹಾಕಿ, ಹೊರಗೆ ಹೊರಡಲು ಅನುವಾದಳು. ಮಗಳು, ‘ಅಮ್ಮ, ಇಂದು ರಜಾ ದಿವಸ. ನೀನು ಮನೆಯಲ್ಲಿರುವುದಿಲ್ಲವೇ?’ ಎಂದು ಕೇಳಿದಳು.
ಅದಕ್ಕೆ ತಾಯಿ, ‘ಇಲ್ಲ ಮಗಳೆ, ಬಹಳ ಮುಖ್ಯ ಕೆಲಸವಿದೆ. ಸಂಜೆ ಬಂದು ಕಾಣುತ್ತೇನೆ. ನೀನು ಪರಿಚಾರಕಿಯ ಜೊತೆ ಆಟವಾಡು. ನನ್ನ ಬಂಗಾರ’ ಎಂದು ಕೆನ್ನೆಗೆ ಮುತ್ತಿಟ್ಟು ಹೊರಟಳು. ಮಗಳು, ‘ಅಮ್ಮ, ಕೋಣೆಗೆ ಬೀಗ ಏಕೆ ಹಾಕಿದೆ?’ ಎಂದು ಮರು ಪ್ರಶ್ನಿಸಿದಳು. ಅವಸರದಲ್ಲಿದ್ದ ತಾಯಿ ಸಮಾಧಾನ ತಂದುಕೊಂಡು, ‘ಮಗು, ಆ ಕೋಣೆಯಲ್ಲಿ ಬಹಳಷ್ಟು ಹಣ, ಒಡವೆ, ಬೆಲೆಬಾಳುವ ವಸ್ತುಗಳಿವೆ. ನಾನು ಇಲ್ಲದೆ ಹೋದಾಗ ಕೆಲಸಗಾರರು ಕದಿಯಬಹುದು. ಆದ್ದರಿಂದ ಬೀಗ ಹಾಕಿದೆ’ ಎಂದಳು.
ಮಗಳು, ‘ಅಮ್ಮ, ನೀನು ನನ್ನನ್ನು ‘‘ನನ್ನ ಬಂಗಾರ, ನನ್ನ ಜೀವ’’ ಎಂದು ಹೇಳುತ್ತ ಇರುತ್ತೀಯಾ. ಬೆಲೆಬಾಳುವ ವಸ್ತುಗಳನ್ನು ಕೆಲಸಗಾರರು ತೆಗೆದುಕೊಂಡು ಹೋಗಬಹುದು ಎಂದು ಜೋಪಾನವಾಗಿಟ್ಟು ಬೀಗ ಹಾಕಿರುವೆ. ಆದರೆ ನನ್ನನ್ನು ಮಾತ್ರ ಅವರ ಬಳಿ ಬಿಟ್ಟು ಹೋಗುತ್ತಿದ್ದೀಯೇ?’ ಎಂದಳು. ಆಗ ತಾಯಿಯ ಮನಃಸ್ಥಿತಿಯನ್ನು ನೀವೇ ಊಹಿಸಿ.
ಮಕ್ಕಳಿಗೆ ನಾವು ಕೊಡುವ ಪ್ರೀತಿ, ಅವರ ಜೊತೆ ಕಳೆಯುವ ಸಮಯ, ನೀಡುವ ಸಂಸ್ಕಾರಗಳು ಬಹಳ ಮುಖ್ಯವಾಗುತ್ತೇವೆಯೇ ವಿನಾ ನಾವು ಅವರಿಗೆ ಕೊಡುವ ವಸ್ತುಗಳಿಂದ ಅಲ್ಲ.