

ದೇವದಾನವರುರುಬುವೊಡಲ ಕಡಲಿನಲಿ
ಜೀವ ಮಂದರಗಿರಿಯ ಕಡೆಯ ಬಿರುಬಿನಲಿ
ನಮ್ಮ ಅಂತಃಕರಣದಲ್ಲಿ ದೇವ ದಾನವರು ವಾಸವಾಗಿದ್ದಾರೆ. ನಾವು ಯಾರನ್ನು ಹೆಚ್ಚು ಪೋಷಿಸುತ್ತೇವೋ ಅವರ ರೂಪವೇ ಆಗುತ್ತೇವೆ. ದೇವ-ದಾನವರ ರಣರಂಗ ಮಾನವ ಹೃದಯವೆಂದು ಹಿರಿಯರು ಹೇಳಿದ್ದಾರೆ. ಕ್ರೂರಿ ರತ್ನಾಕರ, ವಾಲ್ಮೀಕಿಯಾದ ಕಥೆ ನಮ್ಮ ಶಾಸ್ತ್ರಗ್ರಂಥಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ರಾವಣ, ಕುಂಭಕರ್ಣ, ಹಿರಣ್ಯಕಶಿಪು ಮೊದಲಾದ ರಾಕ್ಷಸ ಸ್ವಭಾವದವರು ಋಷಿಪುತ್ರರಾಗಿದ್ದೂ, ತಮ್ಮಲ್ಲಿ ಯಾವುದೇ ರೀತಿಯ ಸಾತ್ವಿಕತೆಯನ್ನು ಹೊಂದದವರಾಗಿದ್ದಾರೆ. ಕೈಕೇಯಿ ಸತ್ಯಭಾಮೆಯರ ಅಂಶ ಪ್ರತಿಯೊಬ್ಬ ಮಾನವನಲ್ಲೂ ಇದೆ. ಅದೇ ರೀತಿ ರಾಮ, ಕೃಷ್ಣ, ವಿಭೀಷಣ ಇವರ ಅಂಶವೂ ಪ್ರತಿಯೊಬ್ಬನಲ್ಲಿದೆ. ಸಾಧಕರಾದ ನಾವು ಸಾತ್ವಿಕ ವೃತ್ತಿಗಳಾದ ರಾಮ, ಕೃಷ್ಣ, ವಿಭೀಷಣ ಮುಂತಾದವುಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಧನ್ಯವಾಗುತ್ತದೆ. ಸಮುದ್ರಮಥನವೆಂದರೆ ನಮ್ಮ ಅಂತರಂಗದಲ್ಲಿ ನಡೆಯುವ ವೃತ್ತಿಗಳ ಕಲಹವೇ ಆಗಿದೆ. ಜೀವಿಗಳಾದ ನಾವು ಮನಸ್ಸಿನ ಶಾಂತಿಯೇ ಜೀವನದ ಧ್ಯೇಯವೆಂದು ನಂಬಿರುವುದಾದರೆ ಹೆಚ್ಚಾಗಿ ಸಾತ್ವಿಕ ವೃತ್ತಿಗಳನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ನಮ್ಮಲ್ಲಿ ದೈವೀಗುಣ ತಾನಾಗಿಯೇ ಪ್ರಕಟಗೊಳ್ಳುತ್ತದೆ.