ಅಂತರಂಗ: ಹೂವಿನಂತೆ ಬಾಳಿದರೆ ಶ್ರೇಯಸ್ಸು

Antaranga vvani
Published on
ಯಾವುದು ಬದುಕಿಗೆ ದಾರಿ ತೋರಿಸುವುದೋ ಅದುವೇ ಧರ್ಮ. ಕತ್ತಲಲ್ಲಿ ಮುನ್ನಡೆಯಲು ಬೆಳಕು ಬೇಕು. ಜೀವನದ ದಾರಿಯಲ್ಲಿ ನಡೆಯುವಾಗ ಯಾವುದು ಸರಿ ಯಾವುದು ತಪ್ಪು ಎಂಬ ಅರಿವನ್ನು ಮೂಡಿಸಿ ಬೆಳೆಸುವಾತನೇ ಶ್ರೀಗುರು. ಸುಂದರ ಮನೆಯಲ್ಲಿ ಹೂವಿನ ಬುಟ್ಟಿಯೊಂದು ಇದ್ದರೆ ಮನೆಯಲ್ಲಿ ಸುಗಂಧ. ಅದೇ ರೀತಿ ಈ ದೇಹವೆಂಬ ಮನೆಯಲ್ಲಿ ಮಹಾತ್ಮರ ಸಂದೇಶ ನುಡಿಗಳಿದ್ದರೆ ಬಾಳೆಲ್ಲ ಸುಖಮಯ.

ಪ್ರಾಣಿ-ಪಕ್ಷಿ-ವೃಕ್ಷಗಳಿಂದ ಬದುಕುವುದನ್ನು ಕಲಿಯಬೇಕು. ಉತ್ತಮ ನುಡಿಗಳು ಮನಸ್ಸಿಗೆ ಮುದ ನೀಡುತ್ತವೆ. ಬದುಕು ಪ್ರಶಾಂತಗೊಳ್ಳಲು ಸತ್ಪುರುಷರ ಸಂದೇಶಗಳನ್ನು ಕೇಳಿ ಮೆಲುಕು ಹಾಕಿ ಮೈಗೂಡಿಸಿಕೊಂಡು ಬಾಳಬೇಕು. ಆಗ ಜೀವನದಲ್ಲಿ ಪವಿತ್ರ ಭಾವ ಮೂಡುತ್ತದೆ. ಸತ್ಯ-ಧರ್ಮವನ್ನು ಮರೆತರೆ ಬದುಕು ನಾಶಗೊಳ್ಳುತ್ತದೆ.

ವಿಶಾಲ ಭೂಮಿ, ಪರಿಶುದ್ಧ ಗಾಳಿ-ಬೆಳಕು, ನೀರು ಎಲ್ಲವೂ ಇಲ್ಲಿದೆ. ಮನುಷ್ಯ ಹೊರಗಿನ ಸಂಪತ್ತು ಗಳಿಸಿದ. ದೇಶ ವಿದೇಶಗಳಲ್ಲಿ ಮನೆ ಕಟ್ಟಿದ. ಹಣ ಸಂಪಾದಿಸಿದ. ಆದರೆ ಮನೆ-ಮನದಲ್ಲಿ ನೆಮ್ಮದಿಯಿಲ್ಲ. ಗಳಿಸಿದ ದುಡ್ಡನ್ನು ಸತ್ಕಾರ್ಯಕ್ಕೆ ಬಳಸಲಿಲ್ಲ. ಮನುಷ್ಯ ಹೂವನ್ನು ಕೀಳುವುದನ್ನು ಕಲಿತನೇ ಹೊರತು ಹೂವಿನಂತೆ ಬಾಳುವುದನ್ನು ಕಲಿಯಲಿಲ್ಲ. ಅರ್ಥೈಸಿಕೊಂಡು ಬಾಳಿ ಬದುಕುವುದರಲ್ಲಿ ಶ್ರೇಯಸ್ಸಿದೆ. ಆಚಾರ್ಯರ ಋಷಿಮುನಿಗಳ ಶರಣರ ಅನುಭವದ ನುಡಿಗಳು ಬಾಳಿನ ಭಾಗ್ಯೋದಯಕ್ಕೆ ಸಹಕಾರಿ.

ಜಗದ್ಗುರು ಶ್ರೀ ರೇಣುಕಾಚಾರ್ಯರು ಭೂಮಂಡಲದಲ್ಲಿ ಮಾನವೀಯ ಉದಾತ್ತ ಮೌಲ್ಯಗಳನ್ನು ಬಿತ್ತಿ ಬೆಳೆದವರು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿದವರು. ಸತ್ಯ ಶುದ್ಧವಾದ ಕಾಯಕ ಮೂಲಕ ಜೀವನ ಉತ್ಕರ್ಷಕ್ಕೆ ಮಾರ್ಗದರ್ಶನ ತೋರಿದವರು. ಜಾತಿ ಮತ ಪಂಥಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬೆಳೆಸಿದವರು. ಅಗಸ್ತ್ಯುಹರ್ಷಿಗಳಿಗೆ ಶಿವಾದ್ವೈತ ಜ್ಞಾನಸಂಪತ್ತನ್ನು ಬೋಧಿಸಿ ಹರಸಿದವರು. ದುರಹಂಕಾರಿಗಳ ದರ್ಪ ನೀಗಿ ಸದ್ವಿಚಾರ ಅರುಹಿ ಬಾಳಿಗೆ ಬೆಳಕು ತೋರಿದವರು. ನಾಡಿನಾದ್ಯಂತ ಜಗತ್ಕಲ್ಯಾಣಕಾರ್ಯ ಕೈಗೊಂಡು ಜನಮಾನಸದಲ್ಲಿ ಸದಾ ಹಸಿರಾಗಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net